ಜನ ನೋಟ
ಶಿವಮೊಗ್ಗ

ಭದ್ರಾವತಿ : ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಯುವ ಕಲಾವಿದ ಸ್ಥಳದಲ್ಲೇ ಸಾವು

ಶಿವಮೊಗ್ಗ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಯುವ ರಂಗ ಕಲಾವಿದ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊನ್ನಟ್ಟಿ ಹೊಸೂರು ಸಮೀಪ ನಡೆದಿದೆ.

ಹರ್ಷ(31) ಮೃತಪಟ್ಟ ಕಲಾವಿದ. ಭದ್ರಾವತಿ ತಾಲೂಕು ಗೋಣಿಬೀಡು ನಿವಾಸಿಯಾದ ಹರ್ಷ ಸಂಬಂಧಿಯೊಬ್ಬರನ್ನು ಭದ್ರಾವತಿಗೆ ಬಿಟ್ಟು ಬರಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಗಂಭೀರವಾಗಿ ಗಾಯಗೊಂಡು ಹರ್ಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೈಹಿಕ ಶಿಕ್ಷಕ, ಕಲಾವಿದ, ಹಾಡುಗಾರನಾಗಿ ಭವಿಷ್ಯ ಕಟ್ಟಿಕೊಳ್ಳಬೇಕಾಗಿದ್ದ ಯುವ ಪ್ರತಿಭೆ ಹರ್ಷ ಸಿ.ಎಂ.(31) ಅವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಭದ್ರಾವತಿ ತಾಲೂಕು ಗೋಣಿಬೀಡಿನ ನಿವಾಸಿ ಮಂಜೇಗೌಡ ಮತ್ತು ಪ್ರೇಮ ಅವರ ಪುತ್ರನಾಗಿದ್ದು, ತಂದೆ, ತಾಯಿ, ಅಕ್ಕ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿ(ಬಿ.ಪಿ.ಇಡಿ, ಎಂ.ಪಿ.ಇಡಿ, ಪಿ.ಜಿ.ಡಿ.ವೈ-ಯೋಗ) ಕಾರ್ಯನಿರ್ವಹಿಸುತ್ತಿದ್ದ ಹರ್ಷ ಜಾನಪದ ಹಾಡುಗಾರಿಕೆ, ಆಂಗಿಕ ಅಭಿನಯ ಹೊಂದಿದ್ದರು. ರಾಷ್ಟ್ರೀಯ ಸೇವಾ ಯೋಜನೆ ತರಬೇತುದಾರನಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರವೃತ್ತಿಯಲ್ಲಿ ಹವ್ಯಾಸಿ ರಂಗ ಕಲಾವಿದರು, ಜಾನಪದ, ರಂಗಗೀತೆ ಗಾಯಕರು, ಯೋಗ ತರಬೇತುದಾರರು ಹಾಗೂ ಅಂತರರಾಷ್ಟ್ರೀಯ ಯೋಗಪಟು ಆಗಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿ, ಕುವೆಂಪು ವಿವಿ ನೀಡುವ ನಿರಂಕುಶಮತಿ ಪ್ರಶಸ್ತಿ, ಮಂಟೇಸ್ವಾಮಿ ಕಲಾ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು.

ಸಹೋದ್ಯೋಗಿಗಳಿಂದ ಸಂತಾಪ

ಹರ್ಷ ಸಿ.ಎಂ. ಅವರ ಅಕಾಲಿಕ ನಿಧನಕ್ಕೆ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಹೋದ್ಯೋಗಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕ್ರೀಡಾ ಶಿಕ್ಷಕರಾಗಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸುವುದರ ಜೊತೆಗೆ ಕಲಾವಿದನಾಗಿ, ಜಾನಪದ ಗಾಯಕನಾಗಿ ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದವರು. ಅವರ ನಗುಮುಖದ ಸೇವೆ, ಆತ್ಮೀಯತೆಯನ್ನು ಮರೆಯಲು ಸಾಧ್ಯವಿಲ್ಲ.

ಹರ್ಷ ಅವರ ಹಾಡುಗಾರಿಕೆ ಕಣ್ಣ ಮುಂದೆ ಕಟ್ಟಿದಂತಿದೆ. ಇಷ್ಟು ಬೇಗ ಎಲ್ಲವನ್ನೂ ಬಿಟ್ಟು ಹೀಗೆ ಹೋಗಬಾರದಿತ್ತು ಎಂದು ಪ್ರಾಂಶುಪಾಲ ಪ್ರೊ. ಅವಿನಾಶ್, ಪ್ರಕಾಶ್ ಮರ್ಗನಳ್ಳಿ, ಲವ ಜಿ.ಆರ್., ಸಹ್ಯಾದ್ರಿ ಕಲಾ ತಂಡ ಕಲಾವಿದರು ಸೇರಿದಂತೆ ಅವರ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.

Related posts

ಆ.23ರಂದು ಅಖಿಲ ಕರ್ನಾಟಕ ಮೂರನೇ ಗಜಲ್ ಸಮ್ಮೇಳನ

JanaNota Editor

ಸೆ. ೫ ರಿಂದ ಎರಡು ದಿನ ‘ಶ್ರಾವಣ ಸಂಭ್ರಮ’ ವಸ್ತು ಪ್ರದರ್ಶನ

JanaNota Editor

ತೀರ್ಥಹಳ್ಳಿ ತಡೆಗೋಡೆ ದುರಂತ : ಜಾಗದ ಮಾಲೀಕ, ಗುತ್ತಿಗೆದಾರ ವಿರುದ್ಧ ಎಫ್‌ಐಆರ್

JanaNota Editor