ಹೈದರಾಬಾದ್: ಶಿವ ಬಡವರ ದೇವರು, ರಾಮ ಶ್ರೀಮಂತರ ದೇವರು ಮತ್ತು ಬಿಜೆಪಿ ಶ್ರೀಮಂತರ ಪಕ್ಷ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಹೇಳಿದ್ದಾರೆ.
ಉತ್ತರ ಭಾರತದಲ್ಲಿ ಶ್ರೀರಾಮನನ್ನು ಪೂಜಿಸಲಾಗುತ್ತದೆ ಮತ್ತು ದಕ್ಷಿಣದಲ್ಲಿ ಶಿವನನ್ನು ಪೂಜಿಸಲಾಗುತ್ತದೆ.ಆದರೆ, ಉತ್ತರ ಭಾರತದಲ್ಲಿ ಬಿಜೆಪಿಯು ಶ್ರೀರಾಮನನ್ನು ಕದ್ದಿರುವ ಕಾರಣ ಕಾಂಗ್ರೆಸ್ ದಕ್ಷಿಣ ರಾಜ್ಯಗಳಲ್ಲಿ ಮಾತ್ರ ಯಶಸ್ವಿಯಾಗಿದ್ದು, ಉತ್ತರದಲ್ಲಿ ಸಂಕಷ್ಟ ಎದುರಿಸುತ್ತಿದೆ ಎಂದು ಹೇಳಿದ್ದಾರೆ.
ನಾವು ದ್ರಾವಿಡರು. ಉತ್ತರ ಭಾರತದ ಜನರು ಆರ್ಯರು. ನಾವು ಶಿವನ ಭಕ್ತರು. ಇವರು ಶ್ರೀರಾಮನ ಭಕ್ತರು. ಬಿಜೆಪಿ ರಾಮನನ್ನು ಕದ್ದಿದೆ. ಮೋದಿ ಅವರು ‘ಹರ್ ಹರ್ ಮಹಾದೇವ್’ ಎಂದು ಏಕೆ ಹೇಳುವುದಿಲ್ಲ? ಬಿಜೆಪಿ ನಾಯಕರು ಎಂದಾದರೂ ವೇದಿಕೆಯ ಮೇಲೆ ‘ಹರ್ ಹರ್ ಮಹಾದೇವ್’ ಎಂದು ಹೇಳಿದ್ದಾರೆಯೇ? ಅವರು ‘ಜೈ ಶ್ರೀರಾಮ್’ ಎಂದು ಮಾತ್ರ ಹೇಳುತ್ತಾರೆ. ನಾವು ‘ಹರ್ ಹರ್ ಮಹಾದೇವ್’ ಎಂದಾಗ ಅವರಿಗೆ ಇಷ್ಟವಾಗುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಜನಪ್ರಿಯವಾಗಿದೆ, ಆದರೆ ದೇಶದ ಉತ್ತರ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಏಕೆ ಜನಪ್ರಿಯವಾಗಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ನಡೆದ ಸೈಮನ್ ಹಿಂತಿರುಗಿ ಚಳವಳಿಯ ಮಾದರಿಯಲ್ಲಿ, ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ ಮತ್ತು ಎಂ.ಕೆ. ಸ್ಟಾಲಿನ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಒಂದಾಗಿ ದೇಶದಲ್ಲಿ ಎಸ್ಐಆರ್ ವಿರುದ್ಧ ಹೋರಾಟವನ್ನು ನಡೆಸಬೇಕಾಗಿದೆ. ಮತಗಳನ್ನು ತೆಗೆದುಹಾಕಲು ಮತ್ತು ಬಿಜೆಪಿಗೆ ಅನುಕೂಲ ಮಾಡಿಕೊಡಲು ಎಸ್ಐಆರ್ ಅನ್ನು ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.
