ಶಿವಮೊಗ್ಗ : ಆಯುರ್ವೇದವು ಭಾರತದ ಪ್ರಾಚೀನ ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾಗಿದ್ದು, ಮಾನವನು ದೀರ್ಘಕಾಲ ಸಮತೋಲನದಿಂದ ಬದುಕಲು ಸಹಕಾರಿಯಾಗಿದೆ. ಇಂದಿನ ಒತ್ತಡದ ಜೀವನಶೈಲಿಗೆ ಆಯುರ್ವೇದ ಉತ್ತಮ ಮಾರ್ಗವಾಗಿದ್ದು, ಎಲ್ಲರೂ ಆಯುರ್ವೇದ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಕರೆ ನೀಡಿದರು.
ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2026ರ ರಾಷ್ಟ್ರೀಯ ಆಯುರ್ವೇದ ದಿನದ ಧ್ಯೇಯವಾಕ್ಯವೂ ‘ಆರೋಗ್ಯಕರ ನಾಳೆಗಾಗಿ ಆಯುರ್ವೇದ’ ಆಗಿದೆ.
ಆಯುರ್ವೇದದ ಉದ್ದೇಶ ಕೇವಲ ರೋಗಗಳನ್ನು ಗುಣಪಡಿಸುವುದಲ್ಲ. ರೋಗಗಳು ಬಾರದಂತೆ ತಡೆಗಟ್ಟುವುದರ ಜೊತೆಗೆ ಮನುಷ್ಯನು ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದಾಗಿದೆ ಎಂದು ರಾಘವೇಂದ್ರ ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಆಯುರ್ವೇದ, ನ್ಯಾಚುರೋಪತಿ ಮತ್ತು ಯೋಗ ರೀಸರ್ಚ್ ರೀಜನಲ್ ಸೆಂಟರ್ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ರಾಘವೇಂದ್ರ ತಿಳಿಸಿದರು. ಆಯುರ್ವೇದ, ವೈದ್ಯಕೀಯ ಶಿಕ್ಷಣ ಹಾಗೂ ಕೃಷಿ-ತೋಟಗಾರಿಕೆ ಕ್ಷೇತ್ರಗಳ ಬೆಳವಣಿಗೆಯಿಂದ ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಆಯುರ್ವೇದ ನಮ್ಮ ಪ್ರಾಚೀನ ಪರಂಪರೆಯಾಗಿದ್ದು, ಕೇವಲ ಕಾಯಿಲೆಗೆ ಔಷಧ ನೀಡುವುದಷ್ಟೇ ಅಲ್ಲದೆ ಉತ್ತಮ ಜೀವನಶೈಲಿಯನ್ನು ತಿಳಿಸುತ್ತದೆ. ನಮ್ಮ ಅಡುಗೆ ಮನೆಯಲ್ಲಿಯೇ ಆರೋಗ್ಯಕ್ಕೆ ಪೂರಕವಾದ ಹಲವು ಆಯುರ್ವೇದ ಪದ್ಧತಿಗಳಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಡಾ. ರವಿಶಂಕರ ಉಡುಪ ಮಾತನಾಡಿ, ಆಯುರ್ವೇದಕ್ಕೆ ಸುಮಾರು 5,000 ವರ್ಷಗಳ ಇತಿಹಾಸವಿದ್ದು, ಆರೋಗ್ಯಕರ ಜೀವನಶೈಲಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಆಯುರ್ವೇದ ದಿನ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಅಂಗರಾಜು ಎಸ್. ಹಿಂಡಸಗಟ್ಟಿ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ವೀಣಾ ಎಂ.ಎಸ್., ಡಾ. ಜಾಧವ್, ಡಾ. ಹರ್ಷ ಪುತ್ರಾಯ, ಡಾ. ಪತಂಜಲಿ, ಡಾ. ಶುಭ ಕೊಳಗದ ಸೇರಿದಂತೆ ಆಯುಷ್ ಇಲಾಖೆಯ ಅಧಿಕಾರಿಗಳು, ವೈದ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
