ಜನ ನೋಟ
ಶಿವಮೊಗ್ಗ

ಅಡಿಕೆ ತೋಟ ಉಳಿಸಲು ಭದ್ರಾ ನೀರಿಗಾಗಿ ಹೋರಾಟದ ಎಚ್ಚರಿಕೆ!

“15 ದಿನ ನೀರು ಹರಿಸಿ, ಇಲ್ಲವಾದರೆ ಸೆ.17ಕ್ಕೆ ಭದ್ರಾ ಜಲಾಶಯದವರೆಗೆ ಪಾದಯಾತ್ರೆ” : ಕೆ.ಟಿ. ಗಂಗಾಧರ್

ಶಿವಮೊಗ್ಗ: ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಅಡಿಕೆ ಸೇರಿದಂತೆ ಬಹುವಾರ್ಷಿಕ ಬೆಳೆಗಳು ನೀರಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಕನಿಷ್ಠ 10ರಿಂದ 15 ದಿನ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ. ಗಂಗಾಧರ್ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆ ತೋಟಗಳ ರಕ್ಷಣೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಕುರಿತು ಸರ್ಕಾರಕ್ಕೆ ಎರಡು ದಿನಗಳ ಗಡುವು ನೀಡಲಾಗಿದ್ದು, ಈ ಅವಧಿಯಲ್ಲಿ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದರೆ ಸೆ.17ರಂದು ಬೆಳಿಗ್ಗೆ 11 ಗಂಟೆಗೆ ಮಲವಗೊಪ್ಪ ಬಳಿಯ ಕಾಡಾ ಕಚೇರಿಯಿಂದ ಭದ್ರಾವತಿ ಮಾರ್ಗವಾಗಿ ಭದ್ರಾ ಜಲಾಶಯದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಭದ್ರಾ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 71.5 ಟಿಎಂಸಿ ಇದ್ದರೂ, ಈ ಬಾರಿ ಮಳೆ ಕೊರತೆಯಿಂದ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಸದ್ಯ 178 ಅಡಿ ನೀರು ಸಂಗ್ರಹವಿದೆ. ಈ ಕಾರಣದಿಂದ ಭತ್ತದಂತಹ ಮಳೆಗಾಲದ ಬೆಳೆಗಳಿಗೆ ನೀರು ಹರಿಸುವಂತೆ ರೈತರು ಒತ್ತಾಯಿಸುತ್ತಿಲ್ಲ. ಆದರೆ ಅಡಿಕೆ, ತೆಂಗು, ಬಾಳೆ ಸೇರಿದಂತೆ ಈಗಾಗಲೇ ನಿಂತಿರುವ ಬಹುವಾರ್ಷಿಕ ಬೆಳೆಗಳನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಮಳೆಯ ನಿರೀಕ್ಷೆಯಲ್ಲಿ ರೈತರು ಇದುವರೆಗೆ ಕಾದಿದ್ದಾರೆ. ಇದೀಗ ಮಳೆಯ ಸಾಧ್ಯತೆಯೂ ಕ್ಷೀಣಿಸಿರುವುದರಿಂದ ಜಲಾಶಯದಲ್ಲಿರುವ ನೀರಿನಿಂದ ಕನಿಷ್ಠ ಒಂದು ಬಾರಿ 15 ದಿನ ಕಾಲುವೆಗಳಿಗೆ ನೀರು ಹರಿಸಿದರೆ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಬಹುದು. ಬೇರೆ ಬೆಳೆಗಳಿಗೆ ನೀರು ಕೇಳುತ್ತಿಲ್ಲ. ಬಹುವಾರ್ಷಿಕ ಬೆಳೆಗಳ ರಕ್ಷಣೆಗೆ ಮಾತ್ರ ನೀರು ನೀಡುವಂತೆ ಮನವಿ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೇಗ ನೀಡಬೇಕು. ಕೇಂದ್ರ ಸರ್ಕಾರ ₹5,300 ಕೋಟಿ ನೆರವು ಘೋಷಿಸಿದ್ದರೂ ಇದುವರೆಗೆ ಹಣ ಬಿಡುಗಡೆಯಾಗಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.

ಪಾದಯಾತ್ರೆಗೂ ಮುನ್ನ ಕಾಡಾ ಕಚೇರಿಯಲ್ಲಿ ಅಧ್ಯಕ್ಷರು ಹಾಗೂ ಆಡಳಿತಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಿ ಸ್ಪಷ್ಟ ಕ್ರಮದ ಭರವಸೆ ನೀಡಿದರೆ ಹೋರಾಟ ಮುಂದುವರಿಸುವ ಅಗತ್ಯವಿಲ್ಲ. ಇಲ್ಲವಾದಲ್ಲಿ ನಿಗದಿಯಂತೆ ಪಾದಯಾತ್ರೆ ನಡೆಸಲಾಗುವುದು ಎಂದರು.

ರಾಜಕೀಯ ಹೇಳಿಕೆಗಳಿಂದ ತೋಟ ಉಳಿಯುವುದಿಲ್ಲ

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಹೇಳಿಕೆ ನೀಡುವ ಬದಲು ರೈತರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಕೇವಲ ರಾಜಕೀಯ ಹೇಳಿಕೆಗಳಿಂದ ರೈತರ ತೋಟಗಳನ್ನು ಉಳಿಸಲು ಸಾಧ್ಯವಿಲ್ಲ ಎಂದು ಕೆ.ಟಿ. ಗಂಗಾಧರ್ ಹೇಳಿದರು.

ಅಡಿಕೆ ಬೆಳೆ ಉಳಿದರೆ ಅದನ್ನು ಅವಲಂಬಿಸಿರುವ ಕೃಷಿ ಕಾರ್ಮಿಕರು, ಖರೀದಿದಾರರು, ಸಹಕಾರ ಸಂಘಗಳು, ರವಾನೆದಾರರು ಹಾಗೂ ರಫ್ತುದಾರರು ಸೇರಿದಂತೆ ಇಡೀ ಆರ್ಥಿಕ ಸರಪಳಿ ಉಳಿಯಲಿದೆ. ಅಡಿಕೆ ವಹಿವಾಟಿನಿಂದ ಸರ್ಕಾರಕ್ಕೂ ಗಣನೀಯ ಆದಾಯ ಬರುತ್ತಿರುವುದರಿಂದ ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಕಲ್ಪಿಸಿ

ರಾಜ್ಯದ ಕೃಷಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ನೆರವಿನಿಂದ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಬೇಕು. ಬೋರ್‌ವೆಲ್ ಕೊರೆಸುವುದು, ನೀರೆತ್ತುವ ಮೋಟಾರ್ ಅಳವಡಿಸುವುದು ಹಾಗೂ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಮೂಲಕ ರೈತರ ನೀರಾವರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ದೊರೆಯದ ಪರಿಸ್ಥಿತಿ ಎದುರಾದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ರೈತರ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ತುಂಗಾ ಹಾಗೂ ಮೇಲ್ತುಂಗಾ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜಗದೀಶ್ ನಾಯಕ್, ಪ್ರಮುಖರಾದ ಸಿ.ಎನ್. ರಂಗಪ್ಪ, ರಘುಪತಿ, ಕೆ. ಜಗದೀಶ್, ಪ್ರಕಾಶ್ ತಲ್ಲಿಕಟ್ಟೆ, ಫರೀದ್, ಶಶಿ ನಲ್ಲಿಸರ, ಸಣ್ಣರಂಗಪ್ಪ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.

Related posts

ಕನಕದಾಸರ ಗಾಯನ ಸ್ಪರ್ಧೆಗೆ ಭರ್ಜರಿ ಬಹುಮಾನ

JanaNota Editor

ಕ್ರೀಡೆಯಿಂದ ಬದುಕಿನಲ್ಲಿ ಯಶಸ್ಸು ಸಾಧ್ಯ : ಮೋಹನ್ ಕುಮಾರ್

JanaNota Editor

ತಾಯಿ ಕೆಲಸ ಮಾಡುತ್ತಿದ್ದ ಮನೆಯನ್ನೇ ಖರೀದಿಸಿ ಸರ್ಪ್ರೈಸ್ ಕೊಟ್ಟ ಮಗ

JanaNota Editor