ನವದೆಹಲಿ: ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಪನಾಮ ಧ್ವಜ ಹೊಂದಿದ್ದ ಸರಕು ಹಡಗಿನ ಮೇಲೆ ಮಂಗಳವಾರ(ಅ.6)ರಂದು ಕ್ಷಿಪಣಿ ದಾಳಿ ನಡೆಸಲಾಗಿದೆ. ಘಟನೆಯಲ್ಲಿ 11 ಭಾರತೀಯ ಸಿಬ್ಬಂದಿ ಗಾಯಗೊಂಡಿದ್ದು, ಈ ಘಟನೆಯನ್ನು ಭಾರತ ಬಲವಾಗಿ ಖಂಡಿಸಿದೆ.
ಒಮಾನ್ ಕರಾವಳಿ ಬಳಿಯ ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಪನಾಮ ಧ್ವಜ ಹೊಂದಿದ ‘ಎಂಟಿ ಆನ್ ಪೀಸ್’ ವಾಣಿಜ್ಯ ಹಡಗಿನ ಮೇಲಿನ ಕ್ಷಿಪಣಿ ದಾಳಿಯನ್ನು ನಾವು ಖಂಡಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಎಂಟಿ ಆನ್ ಪೀಸ್’ ಹೆಸರಿನ ಈ ವಾಣಿಜ್ಯ ಹಡಗಿನಲ್ಲಿ 17 ಭಾರತೀಯರು ಸೇರಿದಂತೆ ಒಟ್ಟು 19 ಸಿಬ್ಬಂದಿ ಇದ್ದರು. ಈ ದಾಳಿಯಲ್ಲಿ 11 ಭಾರತೀಯರು ಸೇರಿದಂತೆ ಒಟ್ಟು 12 ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ವಾಣಿಜ್ಯ ಹಡಗುಗಳು, ನಾವಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದನ್ನು ಕೊನೆಗೊಳಿಸಬೇಕು ಹಾಗೂ ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ನೌಕಾಯಾನ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಆದಷ್ಟು ಬೇಗ ಪುನರಾರಂಭಿಸಬೇಕು.
Plಈ ಪ್ರದೇಶದಲ್ಲಿ ಹಡಗುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳು ತೀವ್ರ ಕಳವಳದ ವಿಷಯವಾಗಿದೆ. ಶಾಂತಿ ಮತ್ತು ಸ್ಥಿರತೆಯ ದೃಷ್ಟಿಯಿಂದ ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂಬ ನಮ್ಮ ನಿಲುವನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಹೇಳಿದೆ.
ಒಮಾನ್ ಅಧಿಕಾರಿಗಳ ನೆರವಿನಿಂದ ಹಡಗಿನ ನಾವಿಕರನ್ನು ಮತ್ತು ಗಾಯಗೊಂಡ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ. ಅವರೆಲ್ಲರೂ ಒಮಾನ್‌ನ ಖಸಾಬ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಮಾನ್ ಅಧಿಕಾರಿಗಳು ನೀಡಿದ ಬೆಂಬಲಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದು ಹೇಳಿದೆ.
