ಜನ ನೋಟ
ರಾಜ್ಯ

ಸಿಗರೇಟ್ ಸೇದಿದ್ದನ್ನು ಪ್ರಶ್ನಿಸಿದ ವ್ಯಕ್ತಿಯ ಹತ್ಯೆ : 8 ಮಂದಿಗೆ ಜೀವಾವಧಿ

ಬೆಂಗಳೂರು: ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ 32 ವರ್ಷದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹತ್ಯೆಗೈದ ಪ್ರಕರಣದಲ್ಲಿ 8 ಮಂದಿ ಅಪರಾಧಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಬೆಂಗಳೂರಿನ 58ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯ ಈ ತೀರ್ಪು ನೀಡಿದೆ. ವಿವೇಕನಗರದ ನಿವಾಸಿಗಳಾದ ಜೆರಾಲ್ಡ್ ಆರೋಗ್ಯರಾಜ್, ಜೇಮ್ಸ್ ಕುಮಾರ್, ವೆಂಕಟೇಶ್, ವಿಜಯ್, ಕಿರಣ್, ವಿಕ್ರಮ್, ವಿನೋದ್ ಕುಮಾರ್ ಹಾಗೂ ವಿಜಯ್ ಶಿಕ್ಷೆಗೆ ಗುರಿಯಾಗಿದ್ದಾರೆ.

2017ರ ಅಕ್ಟೋಬರ್ 1ರಂದು ಶಾಂತಿನಗರದ ಬಿ ಸ್ಟ್ರೀಟ್‌ನಲ್ಲಿ ಹರೀಶ್ ಹತ್ಯೆಯಾಗಿದ್ದರು. ಮನೆಯ ಹೊರಗೆ ನಿಂತಿದ್ದ ಹರೀಶ್, ಆರೋಪಿಗಳು ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿರುವುದನ್ನು ಪ್ರಶ್ನಿಸಿ, ಸ್ಥಳದಿಂದ ತೆರಳದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದರು.

ಇದರಿಂದ ಆಕ್ರೋಶಗೊಂಡ ಆರೋಪಿಗಳು ಅಲ್ಲಿಂದ ತೆರಳಿದ್ದರು. ಆದರೆ ಅದೇ ರಾತ್ರಿ ಸುಮಾರು 12.30ಕ್ಕೆ ಲಾಂಗ್ ಹಾಗೂ ಇತರ ಮಾರಕಾಸ್ತ್ರಗಳೊಂದಿಗೆ ಮರಳಿ ಬಂದು, ಮೂವರು ಸ್ನೇಹಿತರೊಂದಿಗೆ ನಿಂತಿದ್ದ ಹರೀಶ್ ಮೇಲೆ ಏಕಾಏಕಿ ದಾಳಿ ನಡೆಸಿದ್ದರು. ಗಲಾಟೆಯ ಸದ್ದು ಕೇಳಿ ಹೊರಬಂದ ಹರೀಶ್ ಅವರ ತಾಯಿ ಮತ್ತು ಪತ್ನಿಯ ಕಣ್ಣೆದುರೇ ಹತ್ಯೆ ನಡೆದಿತ್ತು.

ಪ್ರಕರಣ ದಾಖಲಿಸಿಕೊಂಡ ಆಶೋಕನಗರ ಠಾಣೆ ಪೊಲೀಸರು, ಮೃತನ ತಾಯಿ, ಪತ್ನಿ ಹಾಗೂ ಮೂವರು ಸ್ನೇಹಿತರ ಹೇಳಿಕೆ ಆಧರಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿಗಳನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಮೂರು ಬಾರಿ ಗುರುತಿನ ಪರೇಡ್ ನಡೆಸಲಾಗಿದ್ದು, ಐವರು ಸಾಕ್ಷಿಗಳು ಎಲ್ಲ ಆರೋಪಿಗಳನ್ನು ನಿಖರವಾಗಿ ಗುರುತಿಸಿದ್ದರು.

ಪ್ರಾಸಿಕ್ಯೂಷನ್ ಮಂಡಿಸಿದ ಸಾಕ್ಷ್ಯಗಳನ್ನು ಪರಿಗಣಿಸಿದ ನ್ಯಾಯಾಲಯ, 8 ಮಂದಿ ಅಪರಾಧಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿದೆ.

Related posts

ಚಿಕ್ಕಮಗಳೂರಲ್ಲಿ ‌ನಕಲಿ ನಾಟಿ ತುಪ್ಪ ತಯಾರಿ ಜಾಲ ಪತ್ತೆ: ರಾಶಿ ರಾಶಿ ರಾಸಾಯನಿಕ ಕಂಡು ಅಧಿಕಾರಿಗಳೇ ದಂಗು

JanaNota Editor

ಬಾಳೆಹಣ್ಣೂ ತಿನ್ನುವಂತಿಲ್ಲ : ಬಾಳೆಕಾಯಿಗೆ ಬಣ್ಣಹಚ್ಚುತ್ತಿದ್ದ ಜಾಲಪತ್ತೆ

JanaNota Editor

ಬೈಂದೂರು ಕರಾವಳಿ ಅಭಿವೃದ್ಧಿಗೆ ‘ಸಾಗರಮಾಲಾ’ ಯೋಜನೆ: ಪರಿಹಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಮನವಿ

JanaNota Editor