ಶಿವಮೊಗ್ಗ, ಆ.26: ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ, ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ (ಮಂತ್ರಾಲಯದ ಶಾಖಾ) ಮಠದ ವತಿಯಿಂದ ಶಿವಮೊಗ್ಗ ನಗರದ ದೇವಂಗಿ ರತ್ನಾಕರ ಬಡಾವಣೆ 2ನೇ ಹಂತ, ಬೊಮ್ಮನಕಟ್ಟೆ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವನ್ನು ಆ.29ರಿಂದ 31ರವರೆಗೆ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿಶೇಷ ಪೂಜೆ, ಅಭಿಷೇಕ, ಪಾದಪೂಜೆ, ಕನಕಾಭಿಷೇಕ, ಮಹಾರಥೋತ್ಸವ, ರಾಜಬೀದಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆ.29: ಶ್ರೀ ಗುರುರಾಯರ ಪೂರ್ವಾರಾಧನೆ
ಆ.29ರ ಶನಿವಾರ ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಹಾಗೂ ನಿರ್ಮಾಲ್ಯ ವಿಸರ್ಜನೆ ನಡೆಯಲಿದೆ. ಬೆಳಿಗ್ಗೆ 7ಕ್ಕೆ ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10ಕ್ಕೆ ಪಾದಪೂಜೆಯೊಂದಿಗೆ ಕನಕಾಭಿಷೇಕ ಅರ್ಚನೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ 5ಕ್ಕೆ ಕುಮಾರಿ ಪ್ರಜ್ಞಾ ಹಾಗೂ ಶ್ರೀಮತಿ ರಶ್ಮಿ ರಾಘವೇಂದ್ರ ಅವರಿಂದ ಭಾರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಆ.30: ಶ್ರೀ ಗುರುರಾಯರ ಮಧ್ಯಾರಾಧನೆ
ಆ.30ರ ಭಾನುವಾರ ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಹಾಗೂ ನಿರ್ಮಾಲ್ಯ ವಿಸರ್ಜನೆ, ಬೆಳಿಗ್ಗೆ 7ಕ್ಕೆ ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10ಕ್ಕೆ ಪಾದಪೂಜೆಯೊಂದಿಗೆ ಕನಕಾಭಿಷೇಕ ಅರ್ಚನೆ ಹಾಗೂ ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ 5ಕ್ಕೆ ಶ್ರೀ ಸರಸ್ವತಿ ವಿದ್ಯಾಲಯ ವತಿಯಿಂದ ವೀಣಾವಾದನ ಕಾರ್ಯಕ್ರಮ ಆಯೋಜಿಸಲಾಗಿದೆ.
ಆ.31: ಉತ್ತರಾರಾಧನೆ ಹಾಗೂ ಮಹಾರಥೋತ್ಸವ
ಆ.31ರ ಸೋಮವಾರ ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಹಾಗೂ ನಿರ್ಮಾಲ್ಯ ವಿಸರ್ಜನೆ, ಬೆಳಿಗ್ಗೆ 7ಕ್ಕೆ ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ ಅಭಿಷೇಕ ನಡೆಯಲಿದೆ.
ಅಂದು ಬೆಳಿಗ್ಗೆ 9ಕ್ಕೆ ಶ್ರೀ ಗುರುರಾಘವೇಂದ್ರ ರಾಯರ ವಿಶೇಷಾಲಂಕೃತ ರಾಜಬೀದಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಬಳಿಕ ಬೆಳಿಗ್ಗೆ 11ಕ್ಕೆ ಮಠದ ಪ್ರಾಕಾರದಲ್ಲಿ ಮಹಾರಥೋತ್ಸವ ನೆರವೇರಲಿದೆ.
ನಂತರ ಡೋಲೋತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ, ನೈವೇದ್ಯ ಹಾಗೂ ತೀರ್ಥ ಪ್ರಸಾದ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ 5ಕ್ಕೆ ಇಂಪು ಮ್ಯೂಸಿಕಲ್ ಕ್ರಿಯೆಟರ್ಸ್ ವತಿಯಿಂದ ದಾಸ ವೈಭವ ಎಂಬ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮೂರು ದಿನಗಳ ಆರಾಧನಾ ಮಹೋತ್ಸವದಲ್ಲಿ ಪ್ರತಿದಿನವೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಗುರುರಾಯರ ಕೃಪಾಶೀರ್ವಾದಕ್ಕೆ ಪಾತ್ರರಾಗುವಂತೆ ಮಠದ ವ್ಯವಸ್ಥಾಪಕರಾದ ಶ್ರೀ ದಿರೇಂದ್ರ ಆಚಾರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅಲ್ಲದೆ, ಭಕ್ತರು ತನು-ಮನ-ಧನದೊಂದಿಗೆ ಕಾರ್ಯಕ್ರಮಗಳಿಗೆ ಸಹಕರಿಸಿ ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗುವಂತೆ ಮನವಿ ಮಾಡಿದ್ದಾರೆ.
