ಶಿವಮೊಗ್ಗ : ತೀವ್ರ ಜ್ವರದಿಂದ ಬಳಲುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಳಿಯಾಳ ಮಟ್ಟಿಕ್ಯಾಂಪ್ ನಿವಾಸಿ ಶ್ವೇತಾ ಎಂದು ಗುರುತಿಸಲಾಗಿದೆ.
ಶ್ವೇತಾ ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಈ ವಸತಿ ಶಾಲೆಯಲ್ಲಿ ಒಟ್ಟು 235 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆರು ದಿನ ಮೆಗ್ಗಾನ್ನಲ್ಲಿ ಚಿಕಿತ್ಸೆ
ತೀವ್ರ ಜ್ವರದಿಂದ ಅಸ್ವಸ್ಥಗೊಂಡಿದ್ದ ಶ್ವೇತಾಳನ್ನು ಆರು ದಿನಗಳ ಹಿಂದೆ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬಾಲಕಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯಲಿಲ್ಲ ಎಂದು ಪೋಷಕರು ಮತ್ತು ಸಂಬಂಧಿಕರು ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳು ಲಭ್ಯವಿರದೆ, ಕೆಲವು ಔಷಧಿಗಳನ್ನು ಹೊರಗಿನಿಂದ ಖರೀದಿಸುವಂತೆ ಸೂಚಿಸಲಾಗುತ್ತಿತ್ತು ಎಂದು ಕುಟುಂಬಸ್ಥರು ದೂರಿದ್ದಾರೆ.
ಚಿಕಿತ್ಸೆ ಮುಂದುವರಿದಂತೆ ಬಾಲಕಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಡಯಾಲಿಸಿಸ್ ಮಾಡುವ ಅಗತ್ಯ ಎದುರಾಗಿತ್ತು ಎನ್ನಲಾಗಿದೆ. ಆದರೆ, ಡಯಾಲಿಸಿಸ್ಗೆ ಅಗತ್ಯವಿದ್ದ ‘ಟ್ಯೂಬಿಂಗ್ ಸೆಟ್’ ಲಭ್ಯವಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಸಕಾಲದಲ್ಲಿ ಡಯಾಲಿಸಿಸ್ ನಡೆಸಲು ಸಾಧ್ಯವಾಗದೆ ಬಾಲಕಿ ಕೋಮಾ ಸ್ಥಿತಿಗೆ ಜಾರಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಣಿಪಾಲಕ್ಕೆ ಕರೆದೊಯ್ಯುವಾಗ ಸಾವು
ಶ್ವೇತಾಳ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು ಎನ್ನಲಾಗಿದೆ. ಅದರಂತೆ ಇಂದು ಬೆಳಿಗ್ಗೆ ಖಾಸಗಿ ಅಂಬುಲೆನ್ಸ್ ಮೂಲಕ ಬಾಲಕಿಯನ್ನು ಮಣಿಪಾಲಕ್ಕೆ ಕರೆದೊಯ್ಯಲಾಗುತ್ತಿತ್ತು.
ಆದರೆ, ಮಣಿಪಾಲ ಆಸ್ಪತ್ರೆ ಸಮೀಪ ತಲುಪುವಷ್ಟರಲ್ಲಿ ಶ್ವೇತಾ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾಳೆ.
ಪೋಷಕರಿಂದ ಆಕ್ರೋಶ, ಪೊಲೀಸ್ ಪ್ರಕರಣ
ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಹಾಗೂ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಹಾಗೂ ಅಗತ್ಯ ವೈದ್ಯಕೀಯ ಉಪಕರಣಗಳ ಕೊರತೆಯಿಂದಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ.
ಬಾಲಕಿಯ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತರಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆದಾಗ್ಯೂ, ಬಾಲಕಿಯ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣವೇ ಎಂಬುದು ತನಿಖೆ ಹಾಗೂ ವೈದ್ಯಕೀಯ ವರದಿಯಿಂದ ಸ್ಪಷ್ಟವಾಗಬೇಕಿದೆ.
