ಜನ ನೋಟ
ಕ್ರೈಂ ನ್ಯೂಸ್

ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧೆಡೆ ಅಪರಾಧ ಪ್ರಕರಣಗಳು

ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ವಿರುದ್ಧ ಪೊಲೀಸ್‌ಗೆ ಕಂಪ್ಲೇಂಟ್ ನೀಡಿದ ವಿದ್ಯಾರ್ಥಿಗಳು
ಸಾಗರ: ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿರುವ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಸಾಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.
ಸೊರಬ ಭಾಗದಿಂದ ಸಾಗರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳೊಂದಿಗೆ ನಿರ್ವಾಹಕನೊಬ್ಬ ಅನುಚಿತವಾಗಿ ವರ್ತಿಸಿ, ಅವಹೇಳನ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಾಲೂಕಿನ ಕೆಲವು ಗ್ರಾಮೀಣ ಭಾಗಗಳಿಂದ ಶಾಲೆ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳನ್ನು ಕೆಲ ನಿರ್ವಾಹಕರು ಹಾಗೂ ಚಾಲಕರು ತಾತ್ಸಾರ ಮನೋಭಾವದಿಂದ ನೋಡುತ್ತಿದ್ದಾರೆ.
ಉದ್ದೇಶಪೂರ್ವಕವಾಗಿ ನಿಗದಿತ ಸ್ಥಳದಲ್ಲಿ ಬಸ್ ನಿಲ್ಲಿಸದೆ ಇರುವುದು ಹಾಗೂ ಇದನ್ನು ಪ್ರಶ್ನಿಸಿದರೆ ವಿದ್ಯಾರ್ಥಿಗಳನ್ನು ಅವಮಾನಿಸುವ ವಿದ್ಯಮಾನ ನಡೆಯುತ್ತಿದೆ ಎಂದು ದೂರಲಾಗಿದೆ.
ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ತಾತ್ಸಾರ ಮನೋಭಾವದಿಂದ ನೋಡದಂತೆ ಚಾಲಕರು ಹಾಗೂ ನಿರ್ವಾಹಕರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅಭಿಷೇಕ್ ಶೆಟ್ಟಿ, ಮೋಹನ್ ಹೆಚ್.ಜಿ, ಪುನೀತ್.ಜಿ, ದಯಾನಂದ್, ಪ್ರೀತಮ್, ಶ್ರೇಯಸ್, ಚೇತನ್, ರಾಕೇಶ್.ಆರ್, ಆಕಾಶ್.ಎಸ್.ಕೆ, ಜೀವನ್, ಪ್ರಜ್ವಲ್, ದರ್ಶನ್, ಮಣಿ ಎಸ್.ಎಂ, ಸಂಜಯ್ ಹಾಗೂ ಡಿ.ಕೆ.ಭರತ್ ಉಪಸ್ಥಿತರಿದ್ದರು.

ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ
ಭದ್ರಾವತಿ: ಮನೆಯಲ್ಲಿ ಭಿನ್ನಾಭಿಪ್ರಾಯ ಹಾಗೂ ಮನಸ್ಸಿನ ಬೇಸರದಿಂದ ೩೭ ವರ್ಷದ ವ್ಯಕ್ತಿಯೊಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭದ್ರಾವತಿಯ ದೇವರಾಜ ಅರಸು ಬಡಾವಣೆಯಲ್ಲಿ ನಡೆದಿದೆ.
ಮೃತರನ್ನು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಸುಶೀಲ್ ಕುಮಾರ್ (೩೭) ಎಂದು ಗುರುತಿಸಲಾಗಿದೆ. ಕುಟುಂಬದಲ್ಲಿ ಉಂಟಾದ ಮನಸ್ತಾಪದಿಂದಾಗಿ ಪತ್ನಿ ಐದು ತಿಂಗಳ ಹಿಂದೆ ತವರು ಮನೆಗೆ ತೆರಳಿದ್ದರು. ಇದರಿಂದ ತೀವ್ರ ಮಾನಸಿಕ ಬೇಸರಕ್ಕೊಳಗಾಗಿದ್ದ ಸುಶೀಲ್, ಅತಿಯಾದ ಮದ್ಯದ ಚಟಕ್ಕೆ ಬಿದ್ದಿದ್ದರೆನ್ನಲಾಗಿದೆ.
ಮನೆಯ ಮಲಗುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಮೃತರ ತಂದೆ ಕೃಪಯ್ಯ ನೀಡಿದ ದೂರಿನನ್ವಯ ಯಾವುದೇ ಅನುಮಾನವಿಲ್ಲವೆಂದು ತಿಳಿಸಲಾಗಿದ್ದು, ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ರಸ್ತೆ ಬದಿ ನಿಂತಿದ್ದ ಎಲ್ ಪಿಜಿ ಸಿಲಿಂಡರ್ ಲಾರಿಗೆ ಕಾರು ಡಿಕ್ಕಿ: ಮೂವರು ಸಾವು
ಚಿಕ್ಕಮಗಳೂರು : ರಸ್ತೆ ಬದಿ ನಿಂತಿದ್ದ ಎಲ್ ಪಿಜಿ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ-ಚಾರ್ಮಾಡಿ ಘಾಟ್ ರಸ್ತೆಯ ಕೊಟ್ಟಿಗೆಹಾರ ಬಳಿ ಇಂದು ಮುಂಜಾನೆ ಸಂಭವಿಸಿದೆ.
ಮೃತರನ್ನು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಹಳಿಲ್‌ಗದ್ದೆ ಗ್ರಾಮದವರಾದ ಜ್ಞಾನೇಶ, ಗುರು ಕಿರಣ್, ಮೋಹನ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಮಕೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು ಕೊಟ್ಟಿಗೆಹಾರ ಬಳಿ ರಸ್ತೆ ಬದಿ ನಿಂತಿದ್ದ ಸಿಲಿಂಡರ್ ಲಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಮೂವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪಿದ್ದಾರೆ.

Related posts

ದೇವರ ದರ್ಶನಕ್ಕೆ ತೆರಳುತ್ತಿದ್ದಾಗ ಭೀಕರ ದುರಂತ: ಒಂದೇ ಕುಟುಂಬದ 7 ಭಕ್ತರು ಸೇರಿ 8 ಮಂದಿ ಸಾವು!

JanaNota Editor

ಶಿವಮೊಗ್ಗದಲ್ಲಿ ನಾನ್ ವೆಜ್ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಾಳಿ

JanaNota Editor

ತಾಯಿಗಾಗಿ ಬದುಕು ಎಂದು ಅಂಗಲಾಚಿದರೂ ಐಫೋನ್ ಗಾಗಿ ಸಾವನ್ನಪ್ಪಿದ ಯುವಕ

JanaNota Editor