ಜನ ನೋಟ
ಶಿವಮೊಗ್ಗ

ಆಶ್ರಯ ಮನೆ ಹಂಚಿಕೆಯಲ್ಲಿ ವಿಳಂಬ ಆರೋಪ : ಶಿವಮೊಗ್ಗ ಪಾಲಿಕೆಗೆ ಮುತ್ತಿಗೆ – ಈಶ್ವರಪ್ಪ ಸೇರಿ ಪ್ರಮುಖರು ಪೊಲೀಸ್ ವಶಕ್ಕೆ

ಶಿವಮೊಗ್ಗ: ಬಡವರಿಗೆ ಆಶ್ರಯ ಯೋಜನೆಯಡಿ ಮಂಜೂರಾಗಿರುವ ಮನೆಗಳನ್ನು ಕಾಲಮಿತಿಯೊಳಗೆ ವಿತರಿಸುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಪುತ್ರ ಕಾಂತೇಶ್ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಶಿವಮೊಗ್ಗ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ವೇಳೆ ಪೊಲೀಸರು ಕೆ.ಎಸ್. ಈಶ್ವರಪ್ಪ, ಕಾಂತೇಶ್ ಹಾಗೂ ಮುಖಂಡ ಇ. ವಿಶ್ವಾಸ್ ಸೇರಿದಂತೆ ಪ್ರಮುಖ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಬೃಹತ್ ಪಾದಯಾತ್ರೆ ಮೂಲಕ ಪಾಲಿಕೆ ಆವರಣಕ್ಕೆ ಆಗಮಿಸಿದ ಪ್ರತಿಭಟನಾಕಾರರು, ಆಶ್ರಯ ಮನೆಗಳ ಹಂಚಿಕೆಯಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿದರು. ಬಳಿಕ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರನ್ನು ಸ್ಥಳಕ್ಕೆ ಕರೆಸಿ, ಅರ್ಹ ಬಡ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸುವಲ್ಲಿ ವಿಳಂಬವಾಗುತ್ತಿರುವುದಕ್ಕೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರು.

6,000 ಮನೆಗಳಲ್ಲಿ ಹಂಚಿಕೆಯಾಗಿದ್ದು ಕೇವಲ 450!

ಒಟ್ಟು 6,000 ಆಶ್ರಯ ಮನೆಗಳ ಪೈಕಿ ಈವರೆಗೆ ಕೇವಲ 450 ಮನೆಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಉಳಿದ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲು ವಿಳಂಬವಾಗುತ್ತಿರುವುದೇಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಕೆಲವು ಫಲಾನುಭವಿಗಳು ನಿಗದಿತ ಹಣ ಪಾವತಿಸದಿರುವುದು ಹಾಗೂ ಗುತ್ತಿಗೆದಾರರಿಗೆ ಪಾವತಿಸಬೇಕಾದ ಮೊತ್ತ ಬಾಕಿ ಉಳಿದಿರುವುದು ವಿಳಂಬಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. ಅಲ್ಲದೆ, ಜನವರಿಯಿಂದ ಮುಂದಿನ ಆರು ತಿಂಗಳ ಅವಧಿಯಲ್ಲಿ ಬಾಕಿ ಇರುವ 1,200 ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ನಿರ್ಧಾರ

ಆಯುಕ್ತರ ಉತ್ತರದಿಂದ ತೃಪ್ತರಾಗದ ರಾಷ್ಟ್ರಭಕ್ತರ ಬಳಗದ ಮುಖಂಡರು, ಆಶ್ರಯ ಮನೆಗಳ ಕಾಮಗಾರಿಗಳು ನೈಜವಾಗಿ ನಡೆಯುತ್ತಿವೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದರು. ಗುತ್ತಿಗೆದಾರರು ಕಾಮಗಾರಿ ಸ್ಥಳದಿಂದ ತೆರಳಿದ್ದಾರೆ ಎಂಬ ಸಚಿವರ ಹೇಳಿಕೆಯನ್ನೂ ಉಲ್ಲೇಖಿಸಿ, ವಾಸ್ತವ ಸ್ಥಿತಿಯನ್ನು ಪರಿಶೀಲಿಸುವಂತೆ ಆಗ್ರಹಿಸಿದರು.

ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಬಳಿಕ ನವೆಂಬರ್ 15ರಂದು ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪ ಪ್ರದೇಶಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಲು ನಿರ್ಧರಿಸಲಾಯಿತು. ಮನೆಗಳ ಹಂಚಿಕೆ ಕುರಿತು ಅಧಿಕಾರಿಗಳು ಲಿಖಿತ ಭರವಸೆ ನೀಡಬೇಕು ಎಂದೂ ಪ್ರತಿಭಟನಾಕಾರರು ಒತ್ತಾಯಿಸಿದರು.

ಹೋರಾಟ ಮುಂದುವರಿಸುವ ಎಚ್ಚರಿಕೆ

ಬಡವರಿಗೆ ನ್ಯಾಯ ದೊರೆಯುವವರೆಗೆ ಹೋರಾಟ ನಿಲ್ಲಿಸುವುದಿಲ್ಲ. ಇಂದಿನ ಪ್ರತಿಭಟನೆ ಮುಂದಿನ ಬೃಹತ್ ಹೋರಾಟದ ಆರಂಭವಷ್ಟೇ ಎಂದು ರಾಷ್ಟ್ರಭಕ್ತರ ಬಳಗದ ಮುಖಂಡರು ಎಚ್ಚರಿಕೆ ನೀಡಿದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸರು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಅವರ ಪುತ್ರ ಕಾಂತೇಶ್ ಹಾಗೂ ಇ. ವಿಶ್ವಾಸ್ ಸೇರಿದಂತೆ ಪ್ರಮುಖ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

Related posts

ಹೊಳೆಹೊನ್ನೂರು : ಹೊಸ ಮಿಷನ್ ಟ್ರಯಲ್ ವೇಳೆ ದುರಂತ: ವಿದ್ಯುತ್ ಶಾಕ್‌ಗೆ ಪೇಂಟರ್ ಸಾವು

JanaNota Editor

ಎಸ್‌ಐಆರ್ ಪರಿಷ್ಕರಣೆಯಲ್ಲಿ 56,725 ಮತದಾರರ ಹೆಸರು ಕೈಬಿಡುವ ಆತಂಕ

JanaNota Editor

ಗುತ್ತಿ ಮಲ್ನಾಡ್ ಆಸ್ಪತ್ರೆಯಲ್ಲಿ ಆ. 6ರಂದು ಆರ್ಥೋಪೆಡಿಕ್ ಸಮಾಲೋಚನಾ ಶಿಬಿರ

JanaNota Editor