ಜನ ನೋಟ
ಶಿವಮೊಗ್ಗ

ಸಾಗರದಲ್ಲಿ ಲಾಡ್ಜ್‌ ಮೇಲೆ ಪೊಲೀಸರ ದಾಳಿ: ಗಾಂಜಾ ಸೇವನೆ ಮಾಡುತ್ತಿದ್ದ ಯುವತಿ ಸೇರಿ ನಾಲ್ವರ ವಿರುದ್ಧ FIR ದಾಖಲು

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಲಾಡ್ಜ್ ಒಂದರಲ್ಲಿ ಕೊಠಡಿ ಪಡೆದು ಗಾಂಜಾ ಮಾದಕ ವಸ್ತು ಸೇವನೆ ಮಾಡುತ್ತಿದ್ದ ಯುವತಿ ಸೇರಿದಂತೆ ನಾಲ್ವರು ಯುವಕರ ವಿರುದ್ಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ಜೋಗ ರಸ್ತೆಯಲ್ಲಿರುವ ಲಾಡ್ಜ್‌ ಒಂದರಲ್ಲಿ ಕೆಲ ಯುವಕ-ಯುವತಿಯರು ಮಾದಕ ವಸ್ತು ಸೇವಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಸಾಗರ ಎಎಸ್ಪಿ ಡಾ.ಬೆನಕ ಪ್ರಸಾದ್ ಅವರಿಗೆ ಸಿಗುತ್ತದೆ. ಆ ಮಾಹಿತಿಯನ್ನು ಸಾಗರ ಟೌನ್ ಠಾಣೆಯ ಪಿಎಸ್‌ಐ ಶಾಂತರಾಜ್ ಎಚ್.ಜಿ. ಅವರಿಗೆ ನೀಡಿ, ದಾಳಿಗೆ ಸೂಚಿಸುತ್ತಾರೆ. ಕೂಡಲೇ ಕಾರ್ಯಪ್ರವೃತ್ತರಾದಂತ ಪಿಎಸ್ಐ, ತಮ್ಮ ಸಿಬ್ಬಂದಿಯೊಂದಿಗೆ ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ.

ಪೊಲೀಸರು ಲಾಡ್ಜ್ ಕೊಠಡಿಯನ್ನು ಪರಿಶೀಲಿಸಿದಾಗ, ಮೂವರು ಯುವಕರು ಹಾಗೂ ಓರ್ವ ಯುವತಿ ಅಸಹಜವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ. ಕೊಠಡಿಯಲ್ಲಿದ್ದ ಟೇಬಲ್ ಮೇಲೆ ಸಿಗರೇಟ್‌ಗಳಲ್ಲಿ ತಂಬಾಕನ್ನು ಖಾಲಿ ಮಾಡಿ, ಅದರೊಳಗೆ ಗಾಂಜಾ ತುಂಬಿ ಸೇವಿಸುತ್ತಿದ್ದ ಕುರುಹುಗಳು ಪತ್ತೆಯಾಗಿವೆ.

ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳನ್ನು ಶಿವಮೊಗ್ಗದ ಲಯನ್ ಸಫಾರಿ ಸಮೀಪದ ಕಾರ್ತಿಕ್ (19), ಸಾಗರ ನಗರದ ಯುವತಿ, ಬೆಂಗಳೂರು ಯಲಹಂಕದ ಶಶಾಂಕ (26) ಹಾಗೂ ಸಾಗರದ ವಿನೋಬ ನಗರದ ನಿಶಾಂತ (25) ಎಂದು ಗುರುತಿಸಲಾಗಿದೆ.

ವಿಚಾರಣೆ ವೇಳೆ ಯುವತಿ ತನಗೆ ವಿನೋಬ ನಗರದ ಮನು ಹೆಗಡೆ ಎಂಬಾತ ಗಾಂಜಾ ನೀಡಿದ್ದಾಗಿ ತಿಳಿಸಿದ್ದು, ಶಶಾಂಕ್ ಅದನ್ನು ಸಿಗರೇಟ್‌ಗೆ ತುಂಬಿ ಕೊಟ್ಟಿದ್ದಾಗಿ ತಿಳಿದುಬಂದಿದೆ.

ಬಳಿಕ ವಶಕ್ಕೆ ಪಡೆದವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕಾರ್ತಿಕ್, ಯುವತಿ ಮತ್ತು ಶಶಾಂಕ ಗಾಂಜಾ ಸೇವಿಸಿರುವುದು ವೈದ್ಯಕೀಯ ತಪಾಸಣೆಯಿಂದ ದೃಢಪಟ್ಟಿದೆ.

ಈ ಸಂಬಂಧ ಸಾಗರ ಟೌನ್ ಪೊಲೀಸರು ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 27(b) ಅಡಿಯಲ್ಲಿ ಕಾರ್ತಿಕ್ (A1), ಯುವತಿ(A2), ಶಶಾಂಕ (A3), ನಿಶಾಂತ (A4) ಹಾಗೂ ಗಾಂಜಾ ಸರಬರಾಜು ಮಾಡಿದ ಮನು ಹೆಗಡೆ (A5) ವಿರುದ್ಧ ಸ್ವಯಂಪ್ರೇರಿತ (Suo moto) ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related posts

ಆಸ್ಪತ್ರೆಗಳ ಹಬ್‌… ಟ್ರಾಫಿಕ್‌ಗೆ ನರಕ! ಪಾರ್ಕಿಂಗ್‌ ಇಲ್ಲದೆ ಪಾರ್ಕ್ ಬಡಾವಣೆ ಪರದಾಟ

JanaNota Editor

ಶಿವಮೊಗ್ಗದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ ಸಿದ್ಧತೆ: 7,651 ಅಭ್ಯರ್ಥಿಗಳು

JanaNota Editor

ಸಾಗರ : ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ ಸಾವು

JanaNota Editor