ದಾವಣಗೆರೆ: ಆನ್‌ಲೈನ್ ಗೇಮ್ ಹುಚ್ಚು ಮತ್ತು ಸ್ನೇಹಿತರು ನೀಡಿದ ಭೀಕರ ಕಿರುಕುಳಕ್ಕೆ ಬೇಸತ್ತು 13 ವರ್ಷದ ಬಾಲಕನೊಬ್ಬ ನೇಣಿಗೆ ಶರಣಾಗಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಮನೋಜ್ ಟಿ.ಆರ್ (13) ಎಂದು ಗುರುತಿಸಲಾಗಿದೆ. ಈ ಘಟನೆಯು ಸ್ಥಳೀಯವಾಗಿ ತೀವ್ರ ಆತಂಕ ಮತ್ತು ಕಳವಳಕ್ಕೆ ಕಾರಣವಾಗಿದೆ.
ಗ್ರಾಮದ ನಾಲ್ವರು ಬಾಲಕರು ‘ಫ್ರೀ ಫೈರ್’ (Free Fire) ಆನ್‌ಲೈನ್ ಗೇಮ್ ಆಪ್‌ನಲ್ಲಿ ಹಣ ಹೂಡುವಂತೆ ಮನೋಜ್‌ಗೆ ನಿರಂತರವಾಗಿ ಒತ್ತಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸ್ನೇಹಿತರ ಒತ್ತಡಕ್ಕೆ ಮಣಿದು ಬಾಲಕ ಮನೆಯಲ್ಲಿದ್ದ ಸುಮಾರು 4 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿ ಅವರಿಗೆ ನೀಡಿದ್ದ. ಮನೆಯಲ್ಲಿ ಇಟ್ಟಿದ್ದ ಹಣದಲ್ಲಿ ವ್ಯತ್ಯಾಸ ಕಂಡುಬಂದು ಪರಿಶೀಲನೆ ನಡೆಸಿದಾಗ, ನಾಲ್ವರು ಬಾಲಕರು ಹಣ ತರುವಂತೆ ಬೆದರಿಕೆ ಹಾಕುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಇಷ್ಟೇ ಅಲ್ಲದೆ, ಹಣ ತರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಮಗನ ಮೇಲೆ ಹಲ್ಲೆ ಕೂಡ ನಡೆಸಲಾಗಿತ್ತು ಎಂದು ಮೃತ ಬಾಲಕನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಸ್ನೇಹಿತರ ಈ ಮಾನಸಿಕ ಹಾಗೂ ಶಾರೀರಿಕ ಕಿರುಕುಳಕ್ಕೆ ಹೆದರಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿದೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
