ಜನ ನೋಟ
ರಾಜ್ಯ

ಸಿಡಿಲು ಬಡಿದು ಮೂವರು ಸಾವು: ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗಲೇ ದುರಂತ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಸಿಡಿಲು ಬಡಿದು ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಓರ್ವ ರೈತ ಸಿಡಿಲಿಗೆ ಬಲಿಯಾಗಿದ್ದಾರೆ.

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ನಾಗೂರು ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಲಕ್ಷ್ಮಿ ಬಸಯ್ಯ ಗುತ್ತೇದಾರ (45) ಹಾಗೂ ಕೂಲಿ ಕಾರ್ಮಿಕೆಯಾಗಿದ್ದ ಸೈಜಾದಬೀ ಫತ್ರುಸಾಬ್ (60) ಮೃತಪಟ್ಟಿದ್ದಾರೆ.

ಬಸಯ್ಯ ಗುತ್ತೇದಾರ ಅವರ ಹೊಲದಲ್ಲಿ ತೊಗರಿ ಬೆಳೆಯಲ್ಲಿ ಸುಮಾರು ಏಳೆಂಟು ಮಹಿಳೆಯರು ಕಳೆ ಕೀಳುತ್ತಿದ್ದರು. ಮಧ್ಯಾಹ್ನ ಊಟಕ್ಕಾಗಿ ಮರದ ಕೆಳಗೆ ಕುಳಿತಿದ್ದ ವೇಳೆ ಏಕಾಏಕಿ ಮಳೆ ಆರಂಭವಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದಾಗ ಭಾರಿ ಗುಡುಗು–ಮಿಂಚಿನೊಂದಿಗೆ ಸಿಡಿಲು ಬಡಿದಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದೇ ವೇಳೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಶ್ರೀರಂಗಪುರ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸಿಡಿಲು ಬಡಿದು ಮದ್ಲೂರ ಗ್ರಾಮದ ರೈತ ಕೇದಾರಪ್ಪ ಮಲ್ಲಪ್ಪ ಗುರ್ಲಹೊಸೂರ (47) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸಂಬಂಧಿ ಭೀಮಪ್ಪ ಕೇದಾರಪ್ಪ ಗುರ್ಲಹೊಸೂರ (45) ತೀವ್ರವಾಗಿ ಗಾಯಗೊಂಡಿದ್ದಾರೆ.

ಕೇದಾರಪ್ಪ ಅವರು ತಮ್ಮ ಹೊಲದಲ್ಲಿ ಗೋವಿನಜೋಳದ ರಾಶಿ ಮಾಡಿದ್ದರಿಂದ ರಾತ್ರಿ ಕಾವಲು ಕಾಯಲು ತೆರಳಿದ್ದರು. ಈ ವೇಳೆ ಗುಡುಗು–ಸಿಡಿಲು ಸಹಿತ ಮಳೆ ಸುರಿಯುತ್ತಿದ್ದಾಗ ಸಿಡಿಲು ಬಡಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಭೀಮಪ್ಪ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ಎಲ್.ಬಿ. ಮಾಳಿ ಪರಿಶೀಲನೆ ನಡೆಸಿದ್ದಾರೆ. ಸಿಡಿಲು ಸಹಿತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

Related posts

ಪಲ್ಟಿ ಯಾದ ಟ್ರಕ್ : ಗಾಯಗೊಂಡವರಿಗೆ ನೆರವಾಗುವ ಬದಲು 15 ನಿಮಿಷದಲ್ಲಿ ಇಡೀ ಲಾರಿ ಈರುಳ್ಳಿ ದೋಚಿದ ಜನ

JanaNota Editor

4 ವರ್ಷದೊಳಗೆ ಮನೆ ಕಟ್ಟದಿದ್ದರೆ ಸರ್ಕಾರಿ ಸೈಟ್ ವಾಪಸ್ : ಫಲಾನುಭವಿಗಳಿಗೆ ಎಚ್ಚರಿಕೆ

JanaNota Editor

ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿ ಆಗಸ್ಟ್ 15 ರಿಂದ 20ರವರೆಗೆ ಉಚಿತ ಆಂಜಿಯೋಪ್ಲಾಸ್ಟಿ ಶಿಬಿರ

JanaNota Editor