ಜನ ನೋಟ
ಶಿವಮೊಗ್ಗ

ಮಲೆನಾಡು ಜಾಬಥಾನ್‌ಗೆ 4,500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು

 ಕೌಶಲ್ಯ, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಶಿವಮೊಗ್ಗ ಬಸವಕೇಂದ್ರದ ಡಾ. ಶ್ರೀ ಬಸವಮರುಳಸಿದ್ದ ಸ್ವಾಮೀಜಿ ಕರೆ

ಶಿವಮೊಗ್ಗ: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾವಂತ ಯುವ ಸಮೂಹವು ಕೇವಲ ಪದವಿ ಪಡೆಯುವುದಕ್ಕಿಂತ ಕೌಶಲ್ಯ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಯ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಶಿವಮೊಗ್ಗ ಬಸವಕೇಂದ್ರದ ಡಾ. ಶ್ರೀ ಬಸವಮರುಳಸಿದ್ದ ಸ್ವಾಮೀಜಿ ಹೇಳಿದರು.

ನಗರದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ‘ಮಲೆನಾಡು ಜಾಬಥಾನ್–2026’ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿರಾರು ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಫೌಂಡೇಷನ್‌ನ ಪ್ರಯತ್ನ ಶ್ಲಾಘನೀಯ. ಯುವಜನತೆಯ ಭವಿಷ್ಯ ರೂಪಿಸುವಲ್ಲಿ ಇಂತಹ ಉದ್ಯೋಗ ಮೇಳಗಳು ಮಹತ್ವದ ವೇದಿಕೆಯಾಗಿದ್ದು, ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸುತ್ತವೆ ಎಂದರು.

ಪದವಿ ಪಡೆದ ಮಾತ್ರಕ್ಕೆ ಉದ್ಯೋಗ ದೊರೆಯುವ ಪರಿಸ್ಥಿತಿ ಈಗಿಲ್ಲ. ಶಿಕ್ಷಣದ ಜೊತೆಗೆ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಜವಾಬ್ದಾರಿಯೂ ಯುವಜನರ ಮೇಲಿದೆ. ಯುವಜನತೆಗೆ ಉದ್ಯೋಗ ಸೃಷ್ಟಿಸುವುದು ಇಂದಿನ ಪ್ರಮುಖ ಸವಾಲಾಗಿದ್ದು, ಸರ್ಕಾರಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜ ಈ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಉದ್ಯೋಗ ಪಡೆಯುವುದನ್ನೇ ಬದುಕಿನ ಅಂತಿಮ ಗುರಿಯನ್ನಾಗಿಸಿಕೊಳ್ಳದೆ, ಭವಿಷ್ಯದಲ್ಲಿ ಕನಿಷ್ಠ ಹತ್ತು ಮಂದಿಗಾದರೂ ಉದ್ಯೋಗ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಯುವಜನರಿಗೆ ಕರೆ ನೀಡಿದರು.

ಸಿಗುವ ಮೊದಲ ಉದ್ಯೋಗವನ್ನು ಬದುಕಿನ ಅಂತಿಮ ಗುರಿಯೆಂದು ಪರಿಗಣಿಸದೆ, ಬದುಕಿನ ಮೊದಲ ಹೆಜ್ಜೆಯಾಗಿ ಸ್ವೀಕರಿಸಬೇಕು. ಕಾಲಕ್ರಮೇಣ ಪ್ರತಿಭೆ, ಸಾಮರ್ಥ್ಯ ಹಾಗೂ ಅನುಭವವನ್ನು ವೃದ್ಧಿಸಿಕೊಂಡು ಉದ್ಯೋಗದಾತರಾಗುವ ಗುರಿ ಹೊಂದಬೇಕು ಎಂದರು.

ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಮಾತನಾಡಿ, ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ಬದಲಾಗದಿದ್ದರೆ ಭವಿಷ್ಯ ನಮ್ಮ ಕೈತಪ್ಪುತ್ತದೆ. ಉತ್ತಮ ಜೀವನಕ್ಕೆ ಶಿಕ್ಷಣ ಎಷ್ಟು ಮುಖ್ಯವೋ, ಕೌಶಲ್ಯವೂ ಅಷ್ಟೇ ಅಗತ್ಯ. ಕೇವಲ ವಿದ್ಯಾರ್ಹತೆ ಇದ್ದರೆ ಸಾಲದು; ನಮ್ಮ ಸಾಮರ್ಥ್ಯವನ್ನು ಗುರುತಿಸಿ ಅದನ್ನು ಕೌಶಲ್ಯವಾಗಿ ಬೆಳೆಸಿಕೊಳ್ಳಬೇಕು ಎಂದರು.

ಡಾ. ಶರತ್ ಮರಿಯಪ್ಪ ಫೌಂಡೇಷನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ ಮಾತನಾಡಿ, ಉದ್ಯೋಗವೆಂದರೆ ಕೇವಲ ಸಂಬಳ ಪಡೆಯುವ ಮಾರ್ಗವಲ್ಲ. ಅದು ಆತ್ಮವಿಶ್ವಾಸ, ಸ್ವಾವಲಂಬನೆ, ಕುಟುಂಬದ ಭದ್ರತೆ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಅವಕಾಶವೂ ಹೌದು. ಒಬ್ಬ ಯುವಕ ಉದ್ಯೋಗ ಪಡೆಯುವುದರಿಂದ ಒಂದು ಕುಟುಂಬದ ಆರ್ಥಿಕ ಸ್ಥಿತಿ ಬದಲಾಗಬಹುದು. ಸಾವಿರಾರು ಯುವಕರು ಉದ್ಯೋಗ ಪಡೆದಾಗ ಜಿಲ್ಲೆ, ರಾಜ್ಯ ಹಾಗೂ ದೇಶದ ಆರ್ಥಿಕ ಶಕ್ತಿ ಹೆಚ್ಚುತ್ತದೆ. ಈ ಉದ್ದೇಶದಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಹಾಗೂ ಆರ್ಯ ವಿಜ್ಞಾನ ಕಾಲೇಜಿನ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ಇದು ಕೃತಕ ಬುದ್ಧಿಮತ್ತೆಯ ಕಾಲವಾಗಿದ್ದು, ಕೆಲವು ಉದ್ಯೋಗಗಳು ಕಡಿಮೆಯಾಗುವ ಸಾಧ್ಯತೆಯಿದ್ದರೂ ಹೊಸ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ. ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ಯುವಜನರು ತಮ್ಮ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಕೈಗಾರಿಕೋದ್ಯಮಿಗಳಾದ ಅಶ್ವತ್ ನಾರಾಯಣ ಶೆಟ್ಟಿ, ತಾರಾನಾಥ್, ಚಂದ್ರಶೇಖರ್, ನಿವೇದನ್ ನೆಂಪೆ, ಡಾ. ಶಶಾಂಕ್, ಕಾಂಗ್ರೆಸ್ ಮುಖಂಡರಾದ ಕೆ. ರಂಗನಾಥ್, ಎಂ. ಪ್ರವೀಣ್ ಕುಮಾರ್, ಎಚ್.ಪಿ. ಗಿರೀಶ್, ವೈ.ಎಚ್. ನಾಗರಾಜ್, ಲೋಕೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕುಮಾರ್ ಉಪ್ಪಾರ್ ಸ್ವಾಗತಿಸಿದರು.

4,500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು

ಮೇಳಕ್ಕೆ ಶಿವಮೊಗ್ಗ ನಗರ ಸೇರಿದಂತೆ ವಿವಿಧೆಡೆಗಳಿಂದ 4,500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು. 173 ಕಂಪನಿಗಳು ಭಾಗವಹಿಸಿ ವಿವಿಧ ಹುದ್ದೆಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದವು.

Related posts

ಬ್ಯಾಂಕ್ ಮುಷ್ಕರದ ನಡುವೆ ಗ್ರಾಹಕರಿಗೆ ಬಿಗ್ ರಿಲೀಫ್; ಎಟಿಎಂ ವಹಿವಾಟು ಶುಲ್ಕ ಸಂಪೂರ್ಣ ರದ್ದು, ಎಷ್ಟು ಬಾರಿಯಾದರೂ ಉಚಿತವಾಗಿ ಹಣ ಡ್ರಾ ಮಾಡಿ

JanaNota Editor

ಇನ್ಮುಂದೆ ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಹೊಸ ಪ್ರಾಣಿಗಳ ದರ್ಶನ

JanaNota Editor

ಕ್ರೀಡೆಯಿಂದ ಬದುಕಿನಲ್ಲಿ ಯಶಸ್ಸು ಸಾಧ್ಯ : ಮೋಹನ್ ಕುಮಾರ್

JanaNota Editor