ಶಿವಮೊಗ್ಗ: “ಜೊತೆಗೂಡುವುದು ಆರಂಭ, ಜೊತೆಗೂಡಿ ಆಲೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಇದೇ ಸಹಕಾರ ತತ್ವ. ಸಹಕಾರ ಪದ್ಧತಿಯಿಂದ ರೈತರ ಪ್ರಗತಿ ಸಾಧ್ಯವಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ತೀರ್ಥಹಳ್ಳಿಯಲ್ಲಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) 75ನೇ ವರ್ಷದ ಸಂಭ್ರಮಾಚರಣೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ತಮಗೂ ಸಹಕಾರಿ ಚಳವಳಿಗೂ ಅವಿನಾಭಾವ ಸಂಬಂಧವಿದೆ. ರಾಮಕೃಷ್ಣ ಹೆಗಡೆ ಅವರು 1983ರಲ್ಲಿ ಕನಕಪುರ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ತಮಗೆ 22 ವರ್ಷ ವಯಸ್ಸಾಗಿತ್ತು. ಆಗ ತಾವೂ ಟಿಎಪಿಸಿಎಂಎಸ್ ಚುನಾವಣೆಗೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದೆ. ಆದರೆ ನಂತರ ಟಿಎಪಿಸಿಎಂಎಸ್ ಕಾರ್ಯಕ್ರಮಕ್ಕೆ ತೆರಳಿರಲಿಲ್ಲ. ಶಾಸಕ ಅರಗ ಜ್ಞಾನೇಂದ್ರ ಅವರ ಒತ್ತಾಯದ ಮೇರೆಗೆ ಕಾರ್ಯಕ್ರಮಕ್ಕೆ ಬಂದಿರುವುದಾಗಿ ತಿಳಿಸಿದರು.
ಕಬ್ಬಿನ ಕಾರ್ಖಾನೆಗಳು ಸಹಕಾರಿ ಪದ್ಧತಿಯಲ್ಲಿ ನಡೆದು ರೈತರನ್ನು ಕಾಪಾಡಿವೆ. ಮಲೆನಾಡು ಭಾಗದಲ್ಲಿ ಬಸ್, ಆಸ್ಪತ್ರೆ, ಬ್ಯಾಂಕ್ಗಳು ಸಹಕಾರಿ ಪದ್ಧತಿಯಲ್ಲಿ ನಡೆಯುತ್ತಿರುವುದು ಈ ಭಾಗದ ಹೆಗ್ಗಳಿಕೆಯಾಗಿದೆ. ಟಿಎಪಿಸಿಎಂಎಸ್ 75 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿ. ಒಂದು ಸಂಸ್ಥೆ ಇಷ್ಟು ವರ್ಷಗಳ ಕಾಲ ನಿರಂತರವಾಗಿ ಉಳಿಯುವುದು ಕಷ್ಟ. ಆದರೆ ತೀರ್ಥಹಳ್ಳಿ ಟಿಎಪಿಸಿಎಂಎಸ್ ಇದನ್ನು ಸಾಧ್ಯವಾಗಿಸಿದೆ. ಸಂಸ್ಥೆಯ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಮಲೆನಾಡು ಭಾಗಕ್ಕೆ ಹೊಸ ಪ್ರವಾಸೋದ್ಯಮ ನೀತಿ ಹಾಗೂ ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳು ಘೋಷಣೆ ಸೇರಿದಂತೆ ಹಲವು ಐತಿಹಾಸಿಕ ನಿರ್ಣಯಗಳನ್ನು ಕರಾವಳಿ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಸರ್ಕಾರ ಕೈಗೊಂಡಿದೆ. ಮಲೆನಾಡು ಭಾಗವನ್ನು ಉಳಿಸುವ ಹಾಗೂ ಅಭಿವೃದ್ಧಿಪಡಿಸುವ ಕುರಿತು ಜನರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಹಾಗೂ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕರಾದ ಅರಗ ಜ್ಞಾನೇಂದ್ರ, ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಲೆನಾಡು ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಸಿ. ಯೋಗೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
