ಜನ ನೋಟ
ಶಿವಮೊಗ್ಗ

ವೀರ ಸಾವರ್ಕರ್ ಹಿಂದೂ ಸಂಘಟನಾ ಮಹಾಮಂಡಳಿ; ಸೆ. 14ರಿಂದ 82ನೇ ಗಣೇಶೋತ್ಸವ

ಶಿವಮೊಗ್ಗ: ವೀರ ಸಾವರ್ಕರ್ ಹಿಂದೂ ಸಂಘಟನಾ ಮಹಾಮಂಡಳಿ (ಹಿಂದೂ ಮಹಾಸಭೆಯ ಅಂಗ ಸಂಸ್ಥೆ) ವತಿಯಿಂದ 82ನೇ ವರ್ಷದ ಗಣೇಶೋತ್ಸವವನ್ನು ಸೆ. 14ರಿಂದ 25ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ರಾಜ್ಯ ಬ್ರಾಹ್ಮಣ ಮಹಾಮಂಡಳಿ ನಿರ್ದೇಶಕ ವಿ.ಎಂ. ಮಾಲತೇಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1945ರಿಂದ ಹಿಂದೂ ಸಂಘಟನಾ ಮಹಾಮಂಡಳಿ ವತಿಯಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ 82ನೇ ವರ್ಷದ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಹಿಂದೂ ಧರ್ಮಾಭಿಮಾನಿಗಳ ಸಹಕಾರದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸೆ. 14ರಂದು ಬೆಳಿಗ್ಗೆ 11.30ಕ್ಕೆ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಶ್ರೀ ವರಸಿದ್ಧಿವಿನಾಯಕ ಸ್ವಾಮಿಯ ಪ್ರತಿಷ್ಠಾಪನೆ ನೆರವೇರಲಿದೆ. ಸೆ. 14ರಿಂದ ಪ್ರತಿದಿನ ಸಂಜೆ 7 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಸೆ. 14ರಂದು ಶ್ರೀ ಮಹಾಗಣಪತಿ ಪ್ರತಿಷ್ಠಾಪನೆ ನಡೆಯಲಿದೆ. ಸೆ. 15ರಂದು ಸ್ನೇಹ ಸಮ್ಮಿಲನ ಕಲಾತಂಡ, ಶಿವಮೊಗ್ಗ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ರೂಪಾ ಕರಿಬಸಯ್ಯ ಹಾಗೂ ಶ್ಯಾಮಲಾ ಸತೀಶ ಆಯೋಜಕರಾಗಿದ್ದಾರೆ.

ಸೆ. 16ರಂದು ಶ್ರೀ ಮಹಾಗಣಪತಿ ಯಕ್ಷಗಾನ ಬಳಗದಿಂದ ಪೌರಾಣಿಕ ಯಕ್ಷಗಾನ, ಸೆ. 17ರಂದು ರಾಜಶೇಖರ್ ಮತ್ತು ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಸೆ. 18ರಂದು ಯಕ್ಷಾನುಗ್ರಹ ಸಂಸ್ಕೃತಿ ಸಂವರ್ಧನಾ ಸಭಾ ವತಿಯಿಂದ ‘ಇಂದ್ರಜಿತು ಕಾಳಗ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸೆ. 19ರಂದು ಚಲನಚಿತ್ರ ನಟ ಹಾಗೂ ಜಾನಪದ ಕಲಾವಿದ ಶ್ರೀ ಗುರುರಾಜ ಹೊಸಕೋಟೆ ತಂಡ, ಬೆಂಗಳೂರು ಇವರಿಂದ ‘ಜಾನಪದ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಸೆ. 20ರಂದು ಯಕ್ಷಸಮೂಹ ಯಕ್ಷಕಲಾ ಪ್ರತಿಷ್ಠಾನ, ಕೆಳಕುಂಜಾಲು–ನೀಲಾವರ ಇವರಿಂದ ಪೌರಾಣಿಕ ಯಕ್ಷಗಾನ ನಡೆಯಲಿದೆ.

ಸೆ. 21ರಂದು ಶಾರ್ವರೀಶ ನಾಟ್ಯಕೇಂದ್ರ, ಹಾವೇರಿ ಹಾಗೂ ಶ್ರೀಮತಿ ಶೃತಿ ಜೋಷಿ ಮತ್ತು ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸೆ. 22ರಂದು ಶ್ರೀಮತಿ ಪುಷ್ಪಲತಾ ಮತ್ತು ಸಂಗಡಿಗರು, ಶಿವಮೊಗ್ಗ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸೆ. 23ರಂದು ಶ್ರೀ ಸಿದ್ಧಿವಿನಾಯಕ ಯಕ್ಷಗಾನ ನಾಟ್ಯ ಸಂಘ, ಧಾರೇಶ್ವರ ಇವರಿಂದ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸೆ. 24ರಂದು ‘ವೀರ ಶಿವಮೂರ್ತಿ’ ಅವರ ಪುಣ್ಯಸ್ಮರಣೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.

ಸೆ. 25ರಂದು ಬೆಳಿಗ್ಗೆ 9.30ಕ್ಕೆ ಶ್ರೀ ವರಸಿದ್ಧಿವಿನಾಯಕ ಸ್ವಾಮಿಯ ರಾಜಬೀದಿ ಉತ್ಸವ ಹಾಗೂ ವಿಸರ್ಜನೆ ನಡೆಯಲಿದೆ ಎಂದು ಮಾಲತೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿಂದೂ ಸಂಘಟನಾ ಮಹಾಮಂಡಳಿ ಸಂಚಾಲಕ ದತ್ತಾತ್ರೇಯ ಹಾಗೂ ನಿರ್ದೇಶಕ ಚಂದ್ರಶೇಖರ (ರಾಜು) ಉಪಸ್ಥಿತರಿದ್ದರು.

AI ನೆರವಿನಿಂದ ಭಕ್ತಿಗೀತೆ ರಚನೆ: ಬಿಡುಗಡೆ

ಹಿಂದೂ ಸಂಘಟನಾ ಮಹಾಮಂಡಳಿ ಆಶ್ರಯದಲ್ಲಿ ಸಾಹಿತಿ ರಾಮ್ ಕದಮ್ ಅವರು ರಚಿಸಿದ ‘ಕೇಸರಿ ಧ್ವಜ ವಿಹಾರಿ ಮಹಾಗಣಪತಿ–ಗೀತನಮನ ಮೋದಗಣಪ’ ಎಂಬ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಸೃಷ್ಟಿಸಲಾದ ಭಕ್ತಿಗೀತೆಯನ್ನು ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗೀತೆಯ ರಚನಾಕಾರ ರಾಮ್ ಕದಮ್, ಗಣಪತಿಯ ಮಹಿಮೆ, ಭಕ್ತಿಭಾವ ಹಾಗೂ ಹಿಂದೂ ಧಾರ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಗೀತೆಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಗಣೇಶೋತ್ಸವದ ಸಂದರ್ಭದಲ್ಲಿ ಭಕ್ತರಲ್ಲಿ ಭಕ್ತಿ ಹಾಗೂ ಉತ್ಸಾಹ ಮೂಡಿಸುವ ಉದ್ದೇಶದಿಂದ ಸಾಹಿತ್ಯ ರಚಿಸಿ, ಆಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಸಂಗೀತ ಹಾಗೂ ಗಾಯನ ರೂಪ ನೀಡಲಾಗಿದೆ. ಸಾಂಪ್ರದಾಯಿಕ ಭಕ್ತಿಗೀತೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿರುವುದು ಗೀತೆಯ ವಿಶೇಷತೆ ಎಂದು ಹೇಳಿದರು.

Related posts

ಅ.8, 9ರಂದು ನೀನಾಸಂ ನಾಟಕೋತ್ಸವ

JanaNota Editor

ಶಿವಮೊಗ್ಗ ಜಿಪಂ ಸಿಇಓ ಬದಲಾವಣೆ : ರಿಷಿ ಆನಂದ್‌ಗೆ ನೂತನ ಹೊಣೆ

JanaNota Editor

ಹಬ್ಬದ ಪ್ರಯಾಣಿಕರಿಗೆ ಸಿಹಿಸುದ್ದಿ: ತಾಳಗುಪ್ಪದವರೆಗೆ ಯಶವಂತಪುರ ಎಕ್ಸ್‌ಪ್ರೆಸ್ ವಿಸ್ತರಣೆ

JanaNota Editor