ಜನ ನೋಟ
ಶಿವಮೊಗ್ಗ

ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ

ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶ

ಶಿವಮೊಗ್ಗ: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ₹15 ಸಾವಿರ ಹಾಗೂ ಸಹಾಯಕಿಯರ ಗೌರವಧನವನ್ನು ₹10 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ ಅವರು, 2011ರಿಂದ ನಿವೃತ್ತರಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕು. ಸ್ವಯಂ ನಿವೃತ್ತರಾದವರಿಗೂ ಗ್ರಾಚ್ಯುಟಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಪಿಂಚಣಿ ನೀಡಬೇಕು ಹಾಗೂ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಹೆಚ್ಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಹೆಚ್ಚುವರಿ ಜವಾಬ್ದಾರಿ ಹೇರಿಕೆ ನಿಲ್ಲಿಸಲು ಆಗ್ರಹ

ಅಂಗನವಾಡಿ ಕೇಂದ್ರಗಳ ಕರ್ತವ್ಯದ ಜೊತೆಗೆ ಬಲವಂತವಾಗಿ ಇತರೆ ಜವಾಬ್ದಾರಿಗಳನ್ನು ವಹಿಸುವುದನ್ನು ತಕ್ಷಣ ನಿಲ್ಲಿಸಬೇಕು. ಇತರೆ ಜವಾಬ್ದಾರಿಗಳನ್ನು ನಿರಾಕರಿಸುವ ಕಾರ್ಯಕರ್ತೆಯರ ವಿರುದ್ಧ ಕ್ರಮ ಕೈಗೊಂಡು ಅಮಾನತುಗೊಳಿಸುವುದನ್ನೂ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

SIR ಸಮೀಕ್ಷೆಗೂ ಹೆಚ್ಚುವರಿ ಗೌರವಧನ

ಎಸ್‌ಐಆರ್ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಗೌರವಧನ ನೀಡುವುದರ ಜೊತೆಗೆ ಖಾಯಂ ಸಂದಾಯ ವ್ಯವಸ್ಥೆ ಕಲ್ಪಿಸಬೇಕು. ಸಮೀಕ್ಷೆ ವೇಳೆ ಅನಾರೋಗ್ಯಕ್ಕೆ ತುತ್ತಾದವರಿಗೆ ವೈದ್ಯಕೀಯ ವೆಚ್ಚ ಭರಿಸಬೇಕು. ಮೃತಪಟ್ಟವರಿಗೆ ₹30 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಅಲ್ಲದೆ, 50 ವರ್ಷ ಮೇಲ್ಪಟ್ಟವರು ಹಾಗೂ ಅನಾರೋಗ್ಯ ಸಮಸ್ಯೆ ಹೊಂದಿರುವವರನ್ನು ಎಸ್‌ಐಆರ್ ಸಮೀಕ್ಷೆ ಕಾರ್ಯದಿಂದ ಕೈಬಿಡಬೇಕು ಸೇರಿದಂತೆ ಒಟ್ಟು 29 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಹೋರಾಟ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಫೆಡರೇಷನ್ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಫೆಡರೇಷನ್ ಜಿಲ್ಲಾಧ್ಯಕ್ಷೆ ವಿಶಾಲ ಕೆ.ಸಿ., ಕಾರ್ಯದರ್ಶಿ ವೇದಾವತಿ, ಮುಖಂಡರಾದ ಎನ್. ರವೀಂದ್ರ ಸಾಗರ್, ಪುಷ್ಪಾ ಸಾಗರ್, ಶಶಿಕಲಾ, ಗಾಯತ್ರಿ, ರೇಣುಕಾ, ಕಲಾವತಿ, ಗೀತಾ ಕರಿನಾಗೋಳ್ಳಿ, ಲೀಲಾವತಿ, ಕುಸುಮ, ಲಕ್ಷ್ಮಿ, ಮೀನಾಕ್ಷಿ ವಿ.ಆರ್., ಸುಶೀಲಾಬಾಯಿ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Related posts

ಸಾಗರ : ಲಗೇಜ್ ಆಟೋ ಡಿಕ್ಕಿ: ಗಂಭೀರವಾಗಿ ಗಾಯಗೊಂಡಿದ್ದ 8 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಸಾವು

JanaNota Editor

ಶಿವಮೊಗ್ಗ: ಹಣ ಕಡಿತ, ದೂರು ನಿರ್ಲಕ್ಷ್ಯ: ಯೂನಿಯನ್ ಬ್ಯಾಂಕ್‌ಗೆ ಬಡ್ಡಿ ಸಮೇತ ಪಾವತಿ ಆದೇಶ

JanaNota Editor

ಮೋದಿ ಹುಟ್ಟುಹಬ್ಬ ‘ನಿರುದ್ಯೋಗಿಗಳ ದಿನ’ವನ್ನಾಗಿ ಆಚರಿಸಿದ ಯುವ ಕಾಂಗ್ರೆಸ್

JanaNota Editor