ಜನ ನೋಟ
ರಾಜ್ಯ

ದುರ್ಗಾ ಮಾತೆಯ ಮೂರ್ತಿ ತರುವಾಗ ಭೀಕರ ರಸ್ತೆ ಅಪಘಾತ; ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿಯಾಗಿ ಮೂವರು ಸಾವು, 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಚಿಕ್ಕೋಡಿ: ನವರಾತ್ರಿ-ದಸರಾ ಹಬ್ಬದ ಹಿನ್ನೆಲೆಯಲ್ಲಿ ದುರ್ಗಾ ಮಾತೆಯ ಮೂರ್ತಿ ಪ್ರತಿಷ್ಠಾಪನೆಗೆ ಹೊರಟಿದ್ದ ಯುವಕರ ಸಂಭ್ರಮ ಕ್ಷಣಾರ್ಧದಲ್ಲಿ ಸೂತಕವಾಗಿ ಮಾರ್ಪಟ್ಟಿದೆ.

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಮಣಗುತ್ತಿ ಗ್ರಾಮದ ಬಳಿ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿಯೊಂದು ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ಎಂಟಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಂಗ್ಯಾನಟ್ಟಿ (ಹಂಜಾನಟ್ಟಿ) ಗ್ರಾಮದಲ್ಲಿ ದಸರಾ ಮಹೋತ್ಸವದ ಅಂಗವಾಗಿ ದುರ್ಗಾ ಮಾತಾ ಮೂರ್ತಿ ಪ್ರತಿಷ್ಠಾಪನೆ ಹಾಗೂ ದುರ್ಗಾ ದೇವಿ ದೌಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದಕ್ಕಾಗಿ ಗ್ರಾಮದ ಯುವಕರು ಬೆಳಗಾವಿ ನಗರಕ್ಕೆ ತೆರಳಿ ದುರ್ಗಾ ಮಾತೆಯ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ಕೂರಿಸಿಕೊಂಡು, ಜೈಘೋಷಗಳೊಂದಿಗೆ ಅತ್ಯಂತ ಉತ್ಸಾಹದಿಂದ ತಮ್ಮೂರಿನತ್ತ ಹೊರಟಿದ್ದರು.

ಟ್ರ್ಯಾಕ್ಟರ್ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ, ಹಿಂಬದಿಯಿಂದ ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ಗೆ ವೇಗದಲ್ಲಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಯುವಕರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಅಪಘಾತದಲ್ಲಿ ಹಂಗ್ಯಾನಟ್ಟಿ ಗ್ರಾಮದ ನಿವಾಸಿಗಳಾದ ಪ್ರಕಾಶ ವಾಸೇದಾರ (28) ಹಾಗೂ ದಾನಪ್ಪ ಜಾಗನೂರೆ (26) ಮತ್ತು ಶಿವಪ್ಪ ಖಾನಾಪೂರೆ (30) ಎಂಬುವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಟ್ರ್ಯಾಕ್ಟರ್‌ನಲ್ಲಿದ್ದ ಇತರೆ ಇಬ್ಬರು ಯುವಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯಲ್ಲಿ ಎಂಟಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕಾಶ ಯರಗಟ್ಟಿ, ಶಿವಾನಂದ ಜಾಗನೂರೆ, ಸುನಿಲ್ ಸುರೇಶ ಲಬ್ಬಿ, ಸುನಿಲ ಶಂಕರ ಲಬ್ಬಿ, ಉಮೇಶ ಹಂಜಿ, ಮಲ್ಲಿಕಾರ್ಜುನ ಸಂಕೇಶ್ವರಿ, ನಂದೇಶ ಡಂಗಿ ಸೇರಿದಂತೆ ಹಲವರನ್ನು ತಕ್ಷಣವೇ ಸ್ಥಳೀಯರ ನೆರವಿನಿಂದ ಬೆಳಗಾವಿಯ ಬಿಮ್ಸ್ (BIMS) ಆಸ್ಪತ್ರೆ ಹಾಗೂ ಸಮೀಪದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ದೇವಿಯ ಮೂರ್ತಿಯನ್ನು ಗ್ರಾಮಕ್ಕೆ ತಂದು ಸಂಭ್ರಮದಿಂದ ಪೂಜಿಸಬೇಕಿದ್ದ ಯುವಕರು ಹೆದ್ದಾರಿಯಲ್ಲೇ ಅಪಘಾತದಿಂದ ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಹಂಗ್ಯಾನಟ್ಟಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಹಬ್ಬದ ಸಡಗರದಲ್ಲಿದ್ದ ಗ್ರಾಮಸ್ಥರು ಹಾಗೂ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Related posts

ಗ್ರಾಮ ಪಂಚಾಯಿತಿ, ತಾಪಂ, ಜಿಪಂ ಚುನಾವಣೆ ಶೀಘ್ರದಲ್ಲೇ? ಸಚಿವ ಸವದಿ ಮಹತ್ವದ ಹೇಳಿಕೆ

JanaNota Editor

ರಾಜ್ಯದಲ್ಲಿ ತಂಬಾಕು, ಗುಟ್ಕಾ, ಪಾನ್ ಮಸಾಲ ನಿಷೇಧಿಸಿ ಸರ್ಕಾರದಿಂದ ಆದೇಶ

JanaNota Editor

ತಲೆಮರೆಸಿಕೊಂಡ ರೇಪ್‌ ಆರೋಪಿಗೆ ಠಾಣೆಯ ಮಾಹಿತಿ ನೀಡುತ್ತಿದ್ದ ಕಾನ್ಸ್‌ಟೇಬಲ್ ಸಸ್ಪೆಂಡ್‌

JanaNota Editor