ಜನ ನೋಟ
ಶಿವಮೊಗ್ಗ

ಶಿವಮೊಗ್ಗದಲ್ಲಿ ರಂಗ ದಸರಾ ಸಂಭ್ರಮ: 39 ಕಾರ್ಯಕ್ರಮ, 25 ನಾಟಕಗಳ ಪ್ರದರ್ಶನ

ಅ. 12ರಿಂದ 19ರವರೆಗೆ ವಿವಿಧೆಡೆ ರಂಗೋತ್ಸವ; 400ಕ್ಕೂ ಹೆಚ್ಚು ಕಲಾವಿದರ ಭಾಗಿ

ಶಿವಮೊಗ್ಗ, ಅ. 10: ರಂಗಭೂಮಿಯ ವಿವಿಧ ಪ್ರಕಾರಗಳನ್ನು ಜನರಿಗೆ ಪರಿಚಯಿಸುವುದರ ಜತೆಗೆ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಶಿವಮೊಗ್ಗ ದಸರಾ ಅಂಗವಾಗಿ ಅ. 12ರಿಂದ 19ರವರೆಗೆ ರಂಗ ದಸರಾ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗ ದಸರಾ ಅಂಗವಾಗಿ ನಾಟಕ ಪ್ರದರ್ಶನ, ಏಕಪಾತ್ರಾಭಿನಯ ಸ್ಪರ್ಧೆ, ಜಾನಪದ ಗೀತೆಗಳ ಗಾಯನ, ರಂಗಗೀತೆ ಗಾಯನ, ನೃತ್ಯರೂಪಕ, ಗ್ರಾಮರಂಗ, ರಂಗ ಸಂತೆ, ಕುಟುಂಬ ರಂಗ ಹಾಗೂ ಉಚಿತ ಪ್ರಸಾಧನ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಅ. 11ರಂದು ಮಧ್ಯಾಹ್ನ 2ಕ್ಕೆ ಸುವರ್ಣ ಸಾಂಸ್ಕೃತಿಕ ಭವನದ (ರಂಗಾಯಣ) ಹೆಲಿಪ್ಯಾಡ್ ಸಮೀಪ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ ನಡೆಯಲಿದೆ. 15 ವರ್ಷದೊಳಗಿನವರಿಗೆ ‘ಡ್ರಾಮಾ ಜೂನಿಯರ್’ ಹಾಗೂ 15 ವರ್ಷ ಮೇಲ್ಪಟ್ಟವರಿಗೆ ‘ಡ್ರಾಮಾ ಸೀನಿಯರ್’ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ರಂಗಭೂಮಿ ಕಲಾವಿದ ಹಾಲಸ್ವಾಮಿ ಆರ್.ಎಸ್. ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಅ. 12ರಂದು ಬೆಳಿಗ್ಗೆ 10.30ಕ್ಕೆ ರಂಗ ದಸರಾ ಉದ್ಘಾಟನೆಯಾಗಲಿದ್ದು, ರಂಗಭೂಮಿ ಕಲಾವಿದ ಹರಿಗೆ ಗೋಪಾಲಸ್ವಾಮಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಲೋಕಾಯುಕ್ತದ ಪೊಲೀಸ್ ಉಪಾಧೀಕ್ಷಕ ಬಿ.ಪಿ. ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ರಂಗಾಯಣದ ನಿರ್ದೇಶಕ ಪ್ರಸನ್ನ ಡಿ. ಸಾಗರ ಉಪಸ್ಥಿತರಿರುವರು.

ಅಂದು ಕಾಲೇಜು ರಂಗೋತ್ಸವದ ಅಂಗವಾಗಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ನಡೆಯಲಿದೆ. ಕೆ.ವಿ. ಸುಬ್ಬಣ್ಣ ಅನುವಾದದ ‘ಭಗವದಜ್ಜುಕೀಯಂ’, ವಚನಗಳನ್ನು ಆಧರಿಸಿದ ‘ಈಸಕ್ಕಿ ಆಸೆ ನಮಗೇಕೆ’, ಡಾ. ಗಜಾನನ ಶರ್ಮ ರಚನೆಯ ‘ಪುಸ್ತಕ ಪಾಂಡಿತ್ಯ’ ಹಾಗೂ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಕೃತಿಯನ್ನು ಆಧರಿಸಿದ ‘ಶೂರ್ಪನಖಿ’ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಎನ್.ಇ.ಎಸ್. ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್, ಕಮಲ ನೆಹರೂ ಮಹಿಳಾ ಕಾಲೇಜು, ಡಿ.ವಿ.ಎಸ್. ಕಲಾ ಮತ್ತು ವಿಜ್ಞಾನ ಪದವಿ ಕಾಲೇಜು ಹಾಗೂ ಸಹ್ಯಾದ್ರಿ ವಿಜ್ಞಾನ ಪದವಿ ಕಾಲೇಜಿನ ವಿದ್ಯಾರ್ಥಿಗಳು ನಾಟಕಗಳನ್ನು ಪ್ರಸ್ತುತಪಡಿಸಲಿದ್ದಾರೆ.

ನಾನಾ ವೇದಿಕೆಗಳಲ್ಲಿ ರಂಗೋತ್ಸವ

ಅ. 12ರಂದು ಮಧ್ಯಾಹ್ನ 3.20ರಿಂದ ರಂಗಾಯಣದ ಹೆಲಿಪ್ಯಾಡ್ ಸಮೀಪ ಜಾನಪದ ಗೀತೆಗಳ ಗಾಯನ ಹಾಗೂ ವಿವಿಧ ನಾಟಕಗಳ ಪ್ರದರ್ಶನ ನಡೆಯಲಿದೆ. ಸರ್ಕಾರಿ ನೌಕರರು, ಶಿಕ್ಷಕರು, ಅರ್ಚಕರ ಸಂಘ, ವಕೀಲ ಮಿತ್ರರು ಹಾಗೂ ಸರ್ಕಾರಿ ಶಾಲಾ ಶಿಕ್ಷಕರ ವೃಂದ ಸೇರಿದಂತೆ ವಿವಿಧ ಕ್ಷೇತ್ರಗಳ ತಂಡಗಳು ಕಾರ್ಯಕ್ರಮ ನೀಡಲಿವೆ.

ಕುವೆಂಪು ರಚನೆಯ ‘ಬೆರಳ್‌ಗೆ ಕೊರಳ್’, ‘ಮರದ ನೆರಳು’, ‘ಸೋರುತಿಹುದು ಸಂಬಂಧ’ ಹಾಗೂ ‘ಹೇಳಿ ನಿವ್ಯಾರ ಕಡೆ??’ ಸೇರಿದಂತೆ ಹಲವು ನಾಟಕಗಳು ಪ್ರದರ್ಶನಗೊಳ್ಳಲಿವೆ.

ರಂಗ ದಸರಾ ಸದಸ್ಯ ಕಾರ್ಯದರ್ಶಿ ಮಧು ನಾಯ್ಕ್ ಮಾತನಾಡಿ, ಈ ಬಾರಿ ಒಟ್ಟು 39 ಕಾರ್ಯಕ್ರಮಗಳು ನಡೆಯಲಿದ್ದು, 25 ನಾಟಕಗಳು ಪ್ರದರ್ಶನಗೊಳ್ಳಲಿವೆ. 400ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದು, ನಗರದ 12ಕ್ಕೂ ಹೆಚ್ಚು ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಅ. 13ರಂದು ಕೃಷಿ ವಿಜ್ಞಾನ ಕಾಲೇಜಿನಲ್ಲಿ ‘ಸತ್ತಂತಿಹರನು ಬಡಿದೆಚ್ಚರಿಸು’ ಹಾಗೂ ಕರ್ನಾಟಕ ಸಂಘದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ‘ಮರ ಮಾತಾಡಿದರೆ’ ನಾಟಕ ಪ್ರದರ್ಶನಗೊಳ್ಳಲಿದೆ. ಅಬ್ಬಲಗೆರೆ ಹಾಗೂ ಹೊಸಳ್ಳಿ ತಾಂಡಾದಲ್ಲಿಯೂ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ಅ. 14ರಂದು ಸಂಜೆ 7ಕ್ಕೆ ಕುವೆಂಪು ರಂಗಮಂದಿರದಲ್ಲಿ ರಂಗ ಸೌರಭ ತಂಡದ ‘ರಾಮಾಯಣದಲ್ಲಿ ಕೈಕೇಯಿ’ ನಾಟಕ ಪ್ರದರ್ಶನಗೊಳ್ಳಲಿದೆ.

ಅ. 16ರಂದು ಸಂಜೆ 7ಕ್ಕೆ ಕುವೆಂಪು ರಂಗಮಂದಿರದಲ್ಲಿ ಹೊಂಗಿರಣ ತಂಡದ ‘ಮೃತ್ಯು’ ನಾಟಕ ಪ್ರದರ್ಶನವಾಗಲಿದೆ. ಇದೇ ವೇಳೆ ಶ್ರೀ ಅಲ್ಲಮಪ್ರಭು ಮೈದಾನದಲ್ಲಿ 100 ಕಲಾವಿದರಿಂದ ರಂಗಗೀತೆ ಗಾಯನ ಹಾಗೂ ನೃತ್ಯರೂಪಕ ನಡೆಯಲಿದೆ.

ಅ. 17ರಂದು ಬೆಳಿಗ್ಗೆ ರಂಗಾಯಣದಲ್ಲಿ ಉಚಿತ ಪ್ರಸಾಧನ ಶಿಬಿರ ನಡೆಯಲಿದ್ದು, ಸಂಜೆ ಕುವೆಂಪು ರಂಗಮಂದಿರದಲ್ಲಿ ‘ನೋಡ್ತಿರಿ ಇನ್ನೊಮ್ಮೆ ಬರ್ತಾನ್ ಅವನು’ ನಾಟಕ ಪ್ರದರ್ಶನಗೊಳ್ಳಲಿದೆ.

ಅ. 18ರಂದು ಸಂಜೆ 7ಕ್ಕೆ ಕುವೆಂಪು ರಂಗಮಂದಿರದಲ್ಲಿ ಮೋಹನ್ ರಾಕೇಶ್ ರಚನೆಯ, ಸಿದ್ದಲಿಂಗ ಪಟ್ಟಣಶೆಟ್ಟಿ ಅನುವಾದದ ‘ಆಷಾಢದ ಒಂದು ದಿನ’ ನಾಟಕವನ್ನು ಆಸ್ಕ್ ಚೆಲುವರಂಗ ತಂಡ ಪ್ರಸ್ತುತಪಡಿಸಲಿದೆ.

ಅ. 19ರಂದು ರಂಗ ದಸರಾ ಸಮಾರೋಪ

ರಂಗ ದಸರಾ ಅ. 19ರಂದು ಸಮಾರೋಪಗೊಳ್ಳಲಿದೆ. ಅಂದು ಬೆಳಿಗ್ಗೆ 10.30ಕ್ಕೆ ರಂಗಾಯಣದ ಹೆಲಿಪ್ಯಾಡ್ ಸಮೀಪ ನಾಲ್ಕು ಸಾರ್ವಜನಿಕ ಕುಟುಂಬಗಳ ಭಾಗವಹಿಸುವಿಕೆಯಲ್ಲಿ ‘ಕುಟುಂಬ ರಂಗ’ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೊನ್ನಾಳಿ ಚಂದ್ರಶೇಖರ್, ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಎಚ್. ಉಪಸ್ಥಿತರಿರುವರು.

ಸಮಾರೋಪದ ಬಳಿಕ ಸಂಜೆ 7ಕ್ಕೆ ಕುವೆಂಪು ರಂಗಮಂದಿರದಲ್ಲಿ ಎಲ್.ಎಸ್. ಸುಧೀಂದ್ರ ರಚನೆಯ ‘ಮಳೆ ನಿಲ್ಲುವವರೆಗೆ’ ನಾಟಕವನ್ನು ವಿಜಯ್ ನೀನಾಸಂ ನಿರ್ದೇಶನದಲ್ಲಿ ಶಿವಮೊಗ್ಗದ ‘ನಮ್ ಟೀಮ್’ ತಂಡ ಪ್ರಸ್ತುತಪಡಿಸಲಿದೆ.

ಸುದ್ದಿಗೋಷ್ಠಿಯಲ್ಲಿ ಆರ್.ಎಸ್. ಹಾಲಸ್ವಾಮಿ, ಚಂದನ್ ನೀನಾಸಂ, ಡಿ.ಎಂ. ರಾಜಕುಮಾರ್, ಎಸ್.ಹೆಚ್. ಸುರೇಶ್ ಉಪಸ್ಥಿತರಿದ್ದರು.

Related posts

ದೇವಿಯ ಕೃಪೆಯಿಂದ ಚಿನ್ನ ಸಿಕ್ಕಿದೆ ಎಂದು ನಂಬಿಸಿ ₹1.3 ಕೋಟಿ ವಂಚನೆ

JanaNota Editor

ಮಲೆನಾಡು ಜಾಬಥಾನ್‌ಗೆ 4,500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು

JanaNota Editor

ವಂದೇ ಮಾತರಂ ಪೂರ್ಣಗೀತೆ ಹಾಡಿಸಿದ ಆರೋಪ : ಕಾಂಗ್ರೆಸ್ ಪ್ರತಿಭಟನೆ

JanaNota Editor