ಜನ ನೋಟ
ಶಿವಮೊಗ್ಗ

ದೇವಿಯ ಕೃಪೆಯಿಂದ ಚಿನ್ನ ಸಿಕ್ಕಿದೆ ಎಂದು ನಂಬಿಸಿ ₹1.3 ಕೋಟಿ ವಂಚನೆ

ಬೆಂಗಳೂರು : ದೈವಿಕ ಕೃಪೆಯಿಂದ ದೊರೆತ ಚಿನ್ನವನ್ನು ನೀಡುವುದಾಗಿ ನಂಬಿಸಿ ಅಕ್ಕಸಾಲಿಗರೊಬ್ಬರಿಗೆ ಬರೋಬ್ಬರಿ 1.3 ಕೋಟಿ ರೂ. ವಂಚಿಸಿರುವ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ.

ತೆಲಂಗಾಣ ಮೂಲದ ಭೂತಂ ಲಿಂಗಯ್ಯ ಎಂಬಾತನ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ಹಣ ಕಳೆದುಕೊಂಡ ಸೆಲ್ವರಾಜ್ ಆಚಾರಿ ಅವರು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಆರೋಗ್ಯ ಸಮಸ್ಯೆಗೆ ಔಷಧ ನೀಡಿ ನಂಬಿಕೆ ಗಳಿಸಿದ ಆರೋಪಿ

ಸೆಲ್ವರಾಜ್ ಆಚಾರಿ ಅವರ ಸೊಸೆಗೆ ಅಸ್ತಮಾ ಕಾಯಿಲೆಗೆ ಭೂತಂ ಲಿಂಗಯ್ಯ ಔಷಧ ನೀಡುತ್ತಿದ್ದ. ಬಳಿಕ ಸೆಲ್ವರಾಜ್ ಅವರ ಬೆನ್ನುನೋವು ಮತ್ತು ಮಂಡಿನೋವಿಗೂ ಔಷಧ ನೀಡಿದ್ದ. ಈ ಮೂಲಕ ಕುಟುಂಬದವರ ವಿಶ್ವಾಸ ಗಳಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಐದು ಕೆಜಿ ಚಿನ್ನವಿದೆ ಎಂದು ನಂಬಿಸಿದ್ದ ಆರೋಪಿ

ತನ್ನ ಬಳಿ ದೇವಿಯ ಕೃಪೆಯಿಂದ ದೊರೆತ ಚಿನ್ನವಿದ್ದು, ಅದನ್ನು ಖರೀದಿಸಿದರೆ ಸಂಪತ್ತು ಹೆಚ್ಚುವುದರ ಜತೆಗೆ ವ್ಯವಹಾರವೂ ವೃದ್ಧಿಯಾಗಲಿದೆ ಎಂದು ಭೂತಂ ಲಿಂಗಯ್ಯ ನಂಬಿಸಿದ್ದ.

ತನ್ನ ಬಳಿ ಐದು ಕೆಜಿ ಚಿನ್ನವಿದೆ ಎಂದು ಹೇಳಿ, ಪರೀಕ್ಷೆಗಾಗಿ ಚಿನ್ನದ ಮಾದರಿಯೊಂದನ್ನು ನೀಡಿದ್ದ. ಅದನ್ನು ಪರೀಕ್ಷಿಸಿದಾಗ ಅಸಲಿ ಚಿನ್ನವೆಂದು ತಿಳಿದುಬಂದ ಹಿನ್ನೆಲೆಯಲ್ಲಿ ಸೆಲ್ವರಾಜ್ ಅವರು ಆರೋಪಿಯ ಮಾತನ್ನು ನಂಬಿದ್ದರು.

ಚಿನ್ನವನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಬೇಕು ಹಾಗೂ ಈ ವಿಚಾರವನ್ನು ಮನೆಯವರಿಗೆ ತಿಳಿಸಬಾರದು ಎಂದು ಆರೋಪಿ ಷರತ್ತು ವಿಧಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎರಡೂವರೆ ವರ್ಷದಲ್ಲಿ ₹1.3 ಕೋಟಿ ಹಣ ಪಡೆದ ಆರೋಪ

ಹೀಗೆ ಸುಮಾರು ಎರಡೂವರೆ ವರ್ಷಗಳ ಅವಧಿಯಲ್ಲಿ ಸೆಲ್ವರಾಜ್ ಅವರಿಂದ ಹಂತ ಹಂತವಾಗಿ ₹1.3 ಕೋಟಿ ಹಣ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಹಣ ಹೊಂದಿಸಲು ಸೆಲ್ವರಾಜ್ ಅವರು ಜಮೀನು ಹಾಗೂ ಕುಟುಂಬದವರ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದರು.

ತನ್ನ ತಂದೆಯ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಊರಿಗೆ ತೆರಳಿದ್ದ ಭೂತಂ ಲಿಂಗಯ್ಯ, ಬಳಿಕ ವಾಪಸ್ ಬಾರದೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ಇದರಿಂದ ವಂಚನೆಗೆ ಒಳಗಾಗಿರುವ ಅನುಮಾನಗೊಂಡ ಸೆಲ್ವರಾಜ್ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Related posts

‘ಕ್ರಾಂತಿಯ ಜ್ಯೋತಿ: ಪ್ರವಾದಿ’ ಶೀರ್ಷಿಕೆಯಡಿ ರಾಜ್ಯಾದ್ಯಂತ ಸೀರತ್‌ ಅಭಿಯಾನ

JanaNota Editor

ಫೊರ್ಟೀಸ್ ಆಸ್ಪತ್ರೆಯಲ್ಲಿ ಶಿವಮೊಗ್ಗದ ಮೂವರಿಗೆ ಯಶಸ್ವಿ‌ ಮೂಳೆ ಶಸ್ತ್ರಚಿಕಿತ್ಸೆ

JanaNota Editor

ಕೋಟೆ ಶ್ರೀ ಮಾರಿಕಾಂಬ ಅಮ್ಮನವರಿಗೆ ಗಜಲಕ್ಷ್ಮಿ ದೇವಿ ಅಲಂಕಾರ

JanaNota Editor