ಜನ ನೋಟ
ರಾಜ್ಯ

ತಲೆಮರೆಸಿಕೊಂಡ ರೇಪ್‌ ಆರೋಪಿಗೆ ಠಾಣೆಯ ಮಾಹಿತಿ ನೀಡುತ್ತಿದ್ದ ಕಾನ್ಸ್‌ಟೇಬಲ್ ಸಸ್ಪೆಂಡ್‌

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್. ಪುರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಕಾಂತೇಶ್ ಎಂಬಾತ ಕರ್ತವ್ಯಲೋಪವೆಸಗಿ ಇದೀಗ ಸೇವೆಯಿಂದ ಅಮಾನತುಗೊಂಡಿದ್ದಾನೆ.

ಅಪರಾಧ ಕೃತ್ಯವೆಸಗಿ ನಾಪತ್ತೆಯಾಗಿರುವ ವ್ಯಕ್ತಿಯ ಬೆನ್ನಿಗೆ ನಿಂತು ಪೊಲೀಸ್ ಇಲಾಖೆಯ ಗೌಪ್ಯ ನಡೆಗಳನ್ನು ಸೋರಿಕೆ ಮಾಡುತ್ತಿದ್ದ ಆರೋಪ ಈತನ ಮೇಲಿದೆ. ಇಲಾಖೆಗೆ ದ್ರೋಹ ಬಗೆದ ಪೇದೆಯ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಆದೇಶ ಹೊರಡಿಸಿದ್ದಾರೆ.

ಬಾಲಕಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಸತೀಶ್ ಪಾತ್ರಿ ಎಂಬಾತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಕಳೆದ ಒಂದು ತಿಂಗಳಿನಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಈತನ ಕುಟುಂಬದೊಂದಿಗೆ ಪೇದೆ ಕಾಂತೇಶ್ ನಿಕಟ ಸಂಪರ್ಕ ಕಾಯ್ದುಕೊಂಡಿದ್ದ.

ಠಾಣಾ ಮಟ್ಟದಲ್ಲಿ ನಡೆಯುತ್ತಿದ್ದ ತನಿಖಾ ಪ್ರಕ್ರಿಯೆಗಳು, ಪೊಲೀಸರ ಕಾರ್ಯಾಚರಣೆಯ ಯೋಜನೆಗಳು ಹಾಗೂ ಸೂಕ್ಷ್ಮ ಸುಳಿವುಗಳನ್ನು ಆತ ಆರೋಪಿಯ ಕಡೆಯವರಿಗೆ ತಲುಪಿಸುತ್ತಿದ್ದ ಪರಿಣಾಮವಾಗಿ, ತನಿಖಾ ತಂಡಕ್ಕೆ ಆತನನ್ನು ಸೆರೆಹಿಡಿಯುವುದು ಸವಾಲಾಗಿ ಪರಿಣಮಿಸಿತ್ತು.

ಮಾಟ-ಮಂತ್ರ, ಭೂತ ಬಿಡಿಸುವ ನೆಪವೊಡ್ಡಿ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಿ, ತೀವ್ರ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದ ಸತೀಶ್ ಪಾತ್ರಿ ವಿರುದ್ಧ ಅತ್ಯಾಚಾರ ಸೇರಿದಂತೆ ಗಂಭೀರ ಪ್ರಕರಣ ದಾಖಲಾಗಿತ್ತು. ಈ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರಕರಣ ದಾಖಲಾಗುತ್ತಿದ್ದಂತೆಯೇ ಬಂಧನದ ಭೀತಿಯಿಂದ ಪರಾರಿಯಾಗಿದ್ದ ಆರೋಪಿಗೆ, ಕಾನೂನು ರಕ್ಷಕನೇ ರಹಸ್ಯ ಮಾಹಿತಿ ರವಾನಿಸಿ ಆಶ್ರಯವಾಗಿದ್ದ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಎಸ್‌ಪಿ ಕಠಿಣ ಕ್ರಮ ಕೈಗೊಂಡಿದ್ದಾರೆ.

Related posts

ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

JanaNota Editor

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ: ಮಧು ಬಂಗಾರಪ್ಪ

JanaNota Editor

ಮತದಾರರು ಪಟ್ಟಿಯಿಂದ ಹೊರಗೆ

JanaNota Editor