ಜನ ನೋಟ
ಶಿವಮೊಗ್ಗ

ಶಿವಮೊಗ್ಗ : ಚಲಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕನಿಗೆ ತೀವ್ರ ಹೃದಯಾಘಾತ : ಸಮಯಪ್ರಜ್ಞೆಯಿಂದ ಆಸ್ಪತ್ರೆಗೆ ದಾಖಲಿಸಿದ ಗುರುಶಕ್ತಿ ಬಸ್ ಸಿಬ್ಬಂದಿ

ರಿಪ್ಪನ್‌ಪೇಟೆ: ಚಲಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕನೊಬ್ಬರಿಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾದ ಸಂದರ್ಭದಲ್ಲಿ, ಬಸ್ ಚಾಲಕ ಹಾಗೂ ನಿರ್ವಾಹಕರು ತೋರಿದ ಸಮಯಪ್ರಜ್ಞೆಯಿಂದ ಅವರನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ನಡೆದಿದೆ.

ಇಂದು ಬೆಳಗ್ಗೆ ರಿಪ್ಪನ್‌ಪೇಟೆಯಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ಗುರುಶಕ್ತಿ ಬಸ್‌ನಲ್ಲಿ ಬೆನವಳ್ಳಿಯಿಂದ ರಮೇಶ್ (45) ಎಂಬವರು ಪ್ರಯಾಣಿಸುತ್ತಿದ್ದರು. ಬಸ್ ಚಿನ್ನಮನೆ ಸಮೀಪ ಬರುತ್ತಿದ್ದ ವೇಳೆ ರಮೇಶ್ ಅವರಿಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.

ಪ್ರಯಾಣಿಕನ ಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿದ ಚಾಲಕ ಮುಸ್ತಾಕ್ ಜಯನಗರ ಹಾಗೂ ನಿರ್ವಾಹಕ ಅಶ್ರಫ್ ಜಯನಗರ ಅವರು ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡಿದ್ದಾರೆ. ಸಮಯ ವ್ಯರ್ಥ ಮಾಡದೆ ಚಾಲಕ ಮುಸ್ತಾಕ್ ಅವರು ನಿಗದಿತ ಮಾರ್ಗದ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸದೇ, ಗಾಡಿಕೊಪ್ಪದ ಸಮೀಪದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ನೇರವಾಗಿ ಬಸ್ ಚಲಾಯಿಸಿದ್ದಾರೆ.

ಆಸ್ಪತ್ರೆಯ ಮುಖ್ಯದ್ವಾರದ ಬಳಿಯೇ ಬಸ್ ನಿಲ್ಲಿಸಿ, ಸಹಪ್ರಯಾಣಿಕರ ನೆರವಿನೊಂದಿಗೆ ಅಸ್ವಸ್ಥಗೊಂಡಿದ್ದ ರಮೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಕೂಡಲೇ ಚಿಕಿತ್ಸೆ ಆರಂಭಿಸಿದ್ದು, ಸಕಾಲದಲ್ಲಿ ವೈದ್ಯಕೀಯ ನೆರವು ದೊರೆತ ಪರಿಣಾಮ ರಮೇಶ್ ಅವರ ಪ್ರಾಣಾಪಾಯ ತಪ್ಪಿದೆ ಎಂದು ತಿಳಿದುಬಂದಿದೆ.

ಹೃದಯಾಘಾತದ ಸಂದರ್ಭದಲ್ಲಿ ಅತ್ಯಂತ ನಿರ್ಣಾಯಕವಾಗಿರುವ ‘ಗೋಲ್ಡನ್ ಅವರ್’ನಲ್ಲಿ ಚಿಕಿತ್ಸೆ ದೊರೆತಿರುವುದು ರಮೇಶ್ ಅವರ ಚೇತರಿಕೆಗೆ ನೆರವಾಗಿದೆ. ಪ್ರಯಾಣಿಕನ ಆರೋಗ್ಯ ಸ್ಥಿತಿಯನ್ನು ಅರಿತು ಯಾವುದೇ ಸಮಯ ವ್ಯರ್ಥ ಮಾಡದೆ ಆಸ್ಪತ್ರೆಗೆ ಕರೆದೊಯ್ದ ಗುರುಶಕ್ತಿ ಬಸ್ ಚಾಲಕ ಹಾಗೂ ನಿರ್ವಾಹಕರ ಕರ್ತವ್ಯಪ್ರಜ್ಞೆ ಮತ್ತು ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

ಜೆಪಿಎನ್ ರಸ್ತೆ, ಜೈಲ್ ರಸ್ತೆಯಲ್ಲಿ ಸಂಚರಿಸುವ ಸಿಟಿಬಸ್ ಮಾರ್ಗ ಬದಲಾವಣೆ

JanaNota Editor

ಹಾರನಹಳ್ಳಿ ರೈಲು ನಿಲ್ದಾಣ ಅಭಿವೃದ್ಧಿಗೆ ಗುದ್ದಲಿ ಪೂಜೆ

JanaNota Editor

ಸಾಗರ : ಲಗೇಜ್ ಆಟೋ ಡಿಕ್ಕಿ: ಗಂಭೀರವಾಗಿ ಗಾಯಗೊಂಡಿದ್ದ 8 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಸಾವು

JanaNota Editor