ಜನ ನೋಟ
ಶಿವಮೊಗ್ಗ

ಹಿರಿಯರಿದ್ದರೆ ಮಾತ್ರ ಕುಟುಂಬಕ್ಕೆ ನಿಜವಾದ ಸಂಭ್ರಮ: ಶಾಸಕ ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ,: ಹಿರಿಯರು ನಮ್ಮ ಭವಿಷ್ಯದ ಭದ್ರತೆಗೆ ಬುನಾದಿ ಹಾಕಿದವರು. ಹಿರಿಯರಿದ್ದರೆ ಮಾತ್ರ ಅದು ಕುಟುಂಬ. ಅವರನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಕೌಟುಂಬಿಕ ವ್ಯವಸ್ಥೆಗೆ ಮಹತ್ವ ನೀಡುವ ನಮ್ಮ ದೇಶದಲ್ಲಿ ಹಿರಿಯರಿಂದಲೇ ಕುಟುಂಬಕ್ಕೆ ಸಂಭ್ರಮ ಮತ್ತು ಸಾರ್ಥಕತೆ ದೊರೆಯುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೊಮ್ಮಕ್ಕಳು ಹಾಗೂ ತಾತ, ಅಜ್ಜಿಯರು ಒಟ್ಟಿಗೆ ಬೆಳೆಯುವ ವಾತಾವರಣ ಕಡಿಮೆಯಾಗುತ್ತಿದೆ. ಹಿರಿಯರೊಂದಿಗೆ ಬೆಳೆಯುವ ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ, ಮೌಲ್ಯಗಳು ಹಾಗೂ ಜೀವನದ ಮಾರ್ಗದರ್ಶನ ದೊರೆಯುತ್ತದೆ ಎಂದು ಹೇಳಿದರು.

ಹಿರಿಯರು ಮೊಮ್ಮಕ್ಕಳನ್ನು ದೇವಸ್ಥಾನಗಳಿಗೆ, ಶುಭ ಸಮಾರಂಭಗಳಿಗೆ ಹಾಗೂ ವಿವಿಧ ಸ್ಥಳಗಳಿಗೆ ಕರೆದೊಯ್ಯುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯುತ್ತಾರೆ. ಬಾಲ್ಯದಲ್ಲಿ ಹಿರಿಯರು ನೀಡುವ ಶಿಕ್ಷಣ, ಸಂಸ್ಕಾರ ಮತ್ತು ಮೌಲ್ಯಗಳು ಮಕ್ಕಳು ದೊಡ್ಡವರಾದಾಗ ಅವರ ಬದುಕಿಗೆ ಸರಿಯಾದ ದಾರಿ ತೋರಿಸುತ್ತವೆ. ಇಂತಹ ವಿಶಿಷ್ಟ ಕುಟುಂಬ ವ್ಯವಸ್ಥೆ ಮತ್ತು ಸಂಸ್ಕಾರ ನೀಡುವ ಪರಂಪರೆ ನಮ್ಮ ದೇಶದ ಹೆಮ್ಮೆಯಾಗಿದೆ ಎಂದರು.

ಶಿವಮೊಗ್ಗದಲ್ಲಿಯೇ 172 ಮಂದಿ ಸದಸ್ಯರು ಪ್ರತಿವರ್ಷ ಹಬ್ಬಗಳ ಸಂದರ್ಭದಲ್ಲಿ ಒಟ್ಟಿಗೆ ಸೇರುವ ಕೂಡು ಕುಟುಂಬವಿದೆ. ಕೂಡು ಕುಟುಂಬದ ಪರಂಪರೆಗೆ ನಮ್ಮ ದೇಶವೇ ಮೇಲ್ಪಂಕ್ತಿಯಾಗಿದೆ. ಕೊನೆಯ ಉಸಿರಿರುವವರೆಗೂ ತಂದೆ-ತಾಯಿಯನ್ನು ನೋಡಿಕೊಳ್ಳುವುದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯಾಗಿದೆ. ತಂದೆ, ತಾಯಿ, ಅಜ್ಜ, ಅಜ್ಜಿ, ಮುತ್ತಜ್ಜ, ಮುತ್ತಜ್ಜಿಯರನ್ನೂ ಒಳಗೊಂಡ ಕುಟುಂಬ ವ್ಯವಸ್ಥೆ ನಮ್ಮ ದೇಶದ ವಿಶೇಷತೆಯಾಗಿದೆ ಎಂದು ತಿಳಿಸಿದರು.

ಜಗತ್ತಿಗೆ ಶಕ್ತಿ ನೀಡುವ ಸಾಮರ್ಥ್ಯ ನಮ್ಮ ದೇಶಕ್ಕಿದೆ. ವಿಶ್ವಗುರುವಾಗುವ ಎಲ್ಲ ಮೌಲ್ಯಗಳು ಮತ್ತು ಸಂಗತಿಗಳು ನಮ್ಮ ಸಂಸ್ಕೃತಿ, ಪರಂಪರೆಯಲ್ಲಿಯೇ ಅಡಕವಾಗಿವೆ. ಇಂತಹ ಸಂದರ್ಭದಲ್ಲಿ ವಿಶ್ವ ತಾಯಂದಿರ ದಿನ, ತಂದೆಯಂದಿರ ದಿನ ಆಚರಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಪ್ರತಿದಿನವೂ ತಂದೆ-ತಾಯಿ ಹಾಗೂ ಹಿರಿಯರನ್ನು ಗೌರವಿಸುವ ಪರಂಪರೆ ಇದೆ ಎಂದು ಅಭಿಪ್ರಾಯಪಟ್ಟರು.

ಹಿರಿಯರು ಕಿರಿಯರ ಬದುಕನ್ನು ರೂಪಿಸಿದವರು. ಅವರ ಜ್ಞಾನ, ಅನುಭವ ಹಾಗೂ ಸಲಹೆಗಳು ಸಮಾಜದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆಯಾಗಿವೆ. ಹಿರಿಯರ ಶಕ್ತಿಯನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ಹಿರಿಯರನ್ನು ಗೌರವಿಸುವುದರ ಜೊತೆಗೆ ಅವರ ಅನುಭವದ ಮಾರ್ಗದರ್ಶನವನ್ನು ಯುವಪೀಳಿಗೆ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಯರು ಹಾಗೂ ವಿವಿಧ ಸಂಸ್ಥೆಗಳ ಮುಖ್ಯಸ್ಥರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಸುವರ್ಣಾ ವಿ. ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಬಣಕಾರ್, ಉಪವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ ಲಿಂಗರಾಜ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಆರ್. ಚಂದ್ರಪ್ಪ, ಕಾರ್ಯದರ್ಶಿ ಷಣ್ಮುಖಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸ್ವಯಂಸೇವಕರು ಹಾಗೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

Related posts

ಶಿವಮೊಗ್ಗ : ಚಲಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕನಿಗೆ ತೀವ್ರ ಹೃದಯಾಘಾತ : ಸಮಯಪ್ರಜ್ಞೆಯಿಂದ ಆಸ್ಪತ್ರೆಗೆ ದಾಖಲಿಸಿದ ಗುರುಶಕ್ತಿ ಬಸ್ ಸಿಬ್ಬಂದಿ

JanaNota Editor

ಅಂಬ್ಲಿಗೋಳ ಜಲಾಶಯ ಭರ್ತಿ: ಸಾಂಪ್ರದಾಯಿಕವಾಗಿ ಬಾಗಿನ

JanaNota Editor

ಸೆ.26ರಿಂದ ಸಕ್ರೆಬೈಲು ಆನೆ ಬಿಡಾರ ಸಾರ್ವಜನಿಕರ ಪ್ರವೇಶಕ್ಕೆ ಓಪನ್

JanaNota Editor