ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣದಲ್ಲಿ ಶಿವಮೊಗ್ಗ ಜವಳಿ ವರ್ತಕರ ಸಂಘದ 2026ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.
ಕ್ರೀಡಾಕೂಟಕ್ಕೆ ಶಾಟ್ಪುಟ್ ಎಸೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಶಿವಮೊಗ್ಗ ವೃತ್ತ ನಿರೀಕ್ಷಕ ದೇವರಾಜ್, ರಾಜ್ಯದ ವಿವಿಧ ಭಾಗಗಳಲ್ಲಿ ಸಂಚಾರಿ ಠಾಣೆಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ತಮಗೆ ತವರು ಜಿಲ್ಲೆಯಾದ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ಹಾಗೂ ತೃಪ್ತಿ ತಂದಿದೆ ಎಂದರು.
ನಗರದ ಸಾರ್ವಜನಿಕರು ಹಾಗೂ ವರ್ತಕರ ನಿರಂತರ ಸಹಕಾರದಿಂದ ಹಲವು ಸಂಚಾರ ಮತ್ತು ಭದ್ರತಾ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಸಂಚಾರ ಜಾಗೃತಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಫುಟ್ಪಾತ್ ಅತಿಕ್ರಮಣ ತೆರವು, ಸಂಚಾರ ಸಂಕೇತಗಳ ನಿಯಮ ಪಾಲನೆ, ಸುಗಮ ಪಾರ್ಕಿಂಗ್ ವ್ಯವಸ್ಥೆ ಹಾಗೂ ಹೆಚ್ಚುತ್ತಿರುವ ಸೈಬರ್ ವಂಚನೆಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜವಳಿ ವರ್ತಕರ ಸಂಘದ ವತಿಯಿಂದ ವೃತ್ತ ನಿರೀಕ್ಷಕ ದೇವರಾಜ್ ಅವರನ್ನು ಸಾಂಪ್ರದಾಯಿಕ ದೇಸೀ ಶೈಲಿಯಲ್ಲಿ ಸನ್ಮಾನಿಸಲಾಯಿತು.
ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗೆದ್ದು ಶಿವಮೊಗ್ಗಕ್ಕೆ ಕೀರ್ತಿ ತಂದ ಸರ್ಕಾರಿ ಕ್ರೀಡಾ ಹಾಸ್ಟೆಲ್ನ ಇಬ್ಬರು ಕ್ರೀಡಾಪಟುಗಳಿಗೆ ಸಂಘದ ವತಿಯಿಂದ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಬೇದ್ರೆ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳು ಹಾಗೂ ನೂರಾರು ಸದಸ್ಯರು ಭಾಗವಹಿಸಿದ್ದರು. ಅವಿನಾಶ್ ಮತ್ತು ಪವನ್ ಲಿಲಾನಿ ಕ್ರೀಡಾಕೂಟವನ್ನು ನಡೆಸಿಕೊಟ್ಟರೆ, ಅನಿಲ್ ಕುಮಾರ್ ಹೆಚ್. ಶೆಟ್ಟರ್ ನಿರೂಪಿಸಿದರು.
