ಮೈಸೂರು : ಮೃತ ಗ್ರಾಹಕರ ಖಾತೆ ಹಾಗೂ ಬ್ಯಾಂಕಿನ ಆಂತರಿಕ ಖಾತೆಯಿಂದ ಒಟ್ಟು ₹61.57 ಲಕ್ಷ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಾಜಿ ಮುಖ್ಯ ವ್ಯವಸ್ಥಾಪಕ ಎ.ವಿ. ಕುಲಕರ್ಣಿ ಅಲಿಯಾಸ್ ಅನಿರುದ್ಧ ವಸಂತರಾವ್ ಕುಲಕರ್ಣಿ ಅವರನ್ನು ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.
ಮೈಸೂರಿನ 1ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ವಿ. ಅವರು ಸೆ.25ರಂದು ತೀರ್ಪು ಪ್ರಕಟಿಸಿ, ಕುಲಕರ್ಣಿ ಅವರಿಗೆ ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿದ್ದಾರೆ.
2009ರ ಮೇ 13ರಿಂದ 2011ರ ಡಿಸೆಂಬರ್ 23ರ ಅವಧಿಯಲ್ಲಿ ಈ ಅಕ್ರಮ ನಡೆದಿದ್ದು, ಆ ಸಂದರ್ಭದಲ್ಲಿ ಕುಲಕರ್ಣಿ ಅವರು ಮೈಸೂರಿನ ಚಾಮುಂಡಿಪುರಂನ ಎಸ್‌ಬಿಐ ಶಾಖೆಯ ಮುಖ್ಯ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪ್ರಾಸಿಕ್ಯೂಷನ್ ಆರೋಪದ ಪ್ರಕಾರ, 2005ರ ಏಪ್ರಿಲ್‌ನಲ್ಲಿ ಮೃತಪಟ್ಟಿದ್ದ ಕೃಷ್ಣ ಅಯ್ಯರ್ ಅವರ ಬ್ಯಾಂಕ್ ಖಾತೆಯಿಂದ ವಂಚನೆಯ ಮೂಲಕ ₹40.53 ಲಕ್ಷವನ್ನು ವರ್ಗಾಯಿಸಲಾಗಿತ್ತು. ಅಲ್ಲದೆ, ಬ್ಯಾಂಕಿನ ಆಂತರಿಕ ಖಾತೆಯಿಂದ ₹21.04 ಲಕ್ಷವನ್ನು ವರ್ಗಾಯಿಸಲಾಗಿತ್ತು. ಒಟ್ಟು ₹61.57 ಲಕ್ಷವನ್ನು ಕುಲಕರ್ಣಿ ಹಾಗೂ ಅವರ ಪುತ್ರನ ಖಾತೆಗಳಿಗೆ ವರ್ಗಾಯಿಸಿ, ಬಳಿಕ ಹಣವನ್ನು ಹಿಂಪಡೆಯಲಾಗಿತ್ತು ಎಂದು ಆರೋಪಿಸಲಾಗಿತ್ತು.
ಬ್ಯಾಂಕಿನ ಹಿರಿಯ ಅಧಿಕಾರಿಗಳು ನಡೆಸಿದ ಆಂತರಿಕ ತನಿಖೆಯಲ್ಲಿ ಅಕ್ರಮ ಹಣ ವರ್ಗಾವಣೆ ಬೆಳಕಿಗೆ ಬಂದಿತ್ತು. ತನಿಖೆ ವೇಳೆ ಕುಲಕರ್ಣಿ ಅವರು ಹಣ ವರ್ಗಾಯಿಸಿರುವುದನ್ನು ಒಪ್ಪಿಕೊಂಡಿದ್ದು, ಬಳಿಕ ಬ್ಯಾಂಕ್‌ಗೆ ಸುಮಾರು ₹62 ಲಕ್ಷ ಮರುಪಾವತಿ ಮಾಡಿದ್ದರು ಎಂದು ತಿಳಿದುಬಂದಿದೆ.
ಆಂತರಿಕ ತನಿಖೆಯ ಬಳಿಕ ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಪೂರ್ಣಗೊಳಿಸಿ 1ನೇ ಸಿಜೆಎಂ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಸಲ್ಲಿಕೆಯಾದ ಸಾಕ್ಷ್ಯಗಳು ಹಾಗೂ ವಾದಗಳನ್ನು ಪರಿಶೀಲಿಸಿದ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 409ರ ಅಡಿಯಲ್ಲಿ ಕುಲಕರ್ಣಿ ಅವರನ್ನು ದೋಷಿ ಎಂದು ತೀರ್ಮಾನಿಸಿತು. ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆಯೊಂದಿಗೆ ₹50 ಸಾವಿರ ದಂಡ ವಿಧಿಸಲಾಗಿದ್ದು, ದಂಡದ ಮೊತ್ತದಲ್ಲಿ ₹40 ಸಾವಿರವನ್ನು ಪರಿಹಾರವಾಗಿ ಬ್ಯಾಂಕ್‌ಗೆ ಪಾವತಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಸರ್ಕಾರದ ಪರ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಕೆ. ಪ್ರಕಾಶ್ ವಾದ ಮಂಡಿಸಿದ್ದರು.
