ಶಿವಮೊಗ್ಗ: ನಗರದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾಮಂಡಲ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಶುಕ್ರವಾರ ಅದ್ದೂರಿಯಾಗಿ ಚಾಲನೆ ದೊರೆಯಿತು.
ಬೆಳಗ್ಗೆ 10.30ಕ್ಕೆ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗಣಪತಿಯೊಂದಿಗೆ ಪೂಜಿಸಲ್ಪಟ್ಟ ಸಣ್ಣ ಗಣಪತಿಯನ್ನು ಭೀಮನಮಡುವಿನಲ್ಲಿ ವಿಸರ್ಜಿಸಲಾಯಿತು. ಬಳಿಕ ಉತ್ಸವ ಗಣಪನಿಗೆ ಮಂಗಳಾರತಿ ನೆರವೇರಿಸಿ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಕೋಟೆ ವೃತ್ತದಲ್ಲಿ ನಡೆದ ಮೆರವಣಿಗೆಗೆ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ದಶಕಗಳಿಂದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಧನಂಜಯ್ ಅವರು ಈ ಬಾರಿಯೂ ಟ್ರ್ಯಾಕ್ಟರ್ ಚಾಲನೆ ಮಾಡಿದರು. ಮೆರವಣಿಗೆ ಆರಂಭದಲ್ಲೇ ಹರಿಗೆಯ ಕೆ.ಕೆ. ಗೌಡ ಕುಟುಂಬದ ವತಿಯಿಂದ 150 ಕೆ.ಜಿ. ತೂಕದ ಸೇಬಿನ ಹಾರ ಅರ್ಪಿಸಲಾಯಿತು.
ಕಲಾಕೃತಿಗಳಿಂದ ಕಂಗೊಳಿಸಿದ ಶಿವಮೊಗ್ಗ
ಉತ್ಸವದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳು ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತಿವೆ. ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ಗಣಪತಿ ಸಾಗುವ ಮಾರ್ಗಗಳಷ್ಟೇ ಅಲ್ಲದೆ ನಗರದ ವಿವಿಧ ಪ್ರಮುಖ ವೃತ್ತಗಳು ಮತ್ತು ರಸ್ತೆಗಳಲ್ಲಿ ಹಲವು ಕಲಾಕೃತಿಗಳನ್ನು ಅಳವಡಿಸಲಾಗಿದೆ. ಕೇಸರಿ ಬಂಟಿಂಗ್ಸ್ಗಳಿಂದ ನಗರ ಅಲಂಕೃತಗೊಂಡಿದೆ.
ಗಾಡಿಕೊಪ್ಪ, ಸಹ್ಯಾದ್ರಿ ಕಾಲೇಜು ಬಳಿಯ ಎಂ.ಆರ್.ಎಸ್. ವೃತ್ತ, ಗಾಂಧಿ ಬಜಾರ್, ಅಕ್ಕಮಹಾದೇವಿ ವೃತ್ತ ಸೇರಿದಂತೆ ವಿವಿಧೆಡೆ ಸ್ವಾಗತ ಕಮಾನುಗಳು ಹಾಗೂ ವಿಶೇಷ ಅಲಂಕಾರಗಳು ಗಮನ ಸೆಳೆದವು.
ಗಾಂಧಿ ಬಜಾರ್ನಲ್ಲಿ ಕಲಾವಿದ ಜೀವನ್ ಅವರ ನೇತೃತ್ವದಲ್ಲಿ ನಿರ್ಮಿಸಲಾಗಿರುವ ಆಂಜನೇಯನ ಬೃಹತ್ ಕಲಾಕೃತಿ ಸಾರ್ವಜನಿಕರ ಗಮನ ಸೆಳೆಯಿತು. ಪ್ರವೇಶ ದ್ವಾರದಲ್ಲಿ ಆಂಜನೇಯ ತನ್ನ ಎದೆ ಬಗೆದು ಶ್ರೀರಾಮ–ಸೀತೆಯ ದರ್ಶನ ಮಾಡಿಸುತ್ತಿರುವ ಕಲಾಕೃತಿ ಸ್ಥಾಪಿಸಲಾಗಿದೆ.
ಹಿಂದೂ ಮಹಾಸಭಾ ದ್ವಾರದಲ್ಲಿ ಪಂಚಮುಖಿ ಆಂಜನೇಯನ ಕಲಾಕೃತಿ ಹಾಗೂ ವಿವಿಧ ಬಣ್ಣಗಳ ವಿದ್ಯುತ್ ಅಲಂಕಾರಗಳು ನೋಡುಗರನ್ನು ಆಕರ್ಷಿಸಿದವು.
ಎ.ಎ. ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಅಂಬಾಭವಾನಿ ಖಡ್ಗ ನೀಡುತ್ತಿರುವ ಕಲಾಕೃತಿ, ವೀರ ಶಿವಮೂರ್ತಿ ವೃತ್ತದಲ್ಲಿ ಸೀಮೋಲ್ಲಂಘನೆಗೆ ಸಿದ್ಧನಾಗಿರುವ ಆಂಜನೇಯನ ಕಲಾಕೃತಿ ಹಾಗೂ ಉ? ನಸಿಂಗ್ ಹೋಮ್ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಗಮನ ಸೆಳೆದವು.
ದುರ್ಗಿಗುಡಿ ಮುಖ್ಯ ರಸ್ತೆ, ಬಿ.ಆರ್. ಅಂಬೇಡ್ಕರ್ ವೃತ್ತ, ಕುವೆಂಪು ರಸ್ತೆ, ವೀರ ಶಿವಮೂರ್ತಿ ವೃತ್ತ, ಸರ್.ಎಂ. ವಿಶ್ವೇಶ್ವರಯ್ಯ ರಸ್ತೆ, ಮಹಾವೀರ ವೃತ್ತ, ಕುವೆಂಪು ರಂಗಮಂದಿರ ರಸ್ತೆ, ಬಸವೇಶ್ವರ ವೃತ್ತ, ಕಾನ್ವೆಂಟ್ ರಸ್ತೆ ಹಾಗೂ ಬಿ.ಹೆಚ್. ರಸ್ತೆಯಿಂದ ಕೋಟೆ ಠಾಣೆ ರಸ್ತೆವರೆಗೆ ಕೇಸರಿ ಬಂಟಿಂಗ್ಸ್ಗಳು ರಾರಾಜಿಸಿದವು.
ಭಕ್ತರಿಗೆ ವಿವಿಧೆಡೆ ಪ್ರಸಾದ, ಪಾನೀಯ
ರಾಜಬೀದಿ ಉತ್ಸವಕ್ಕೆ ಶಿವಮೊಗ್ಗ ಸೇರಿದಂತೆ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದರು. ಭಕ್ತರು ಹಾಗೂ ಸಾರ್ವಜನಿಕರಿಗೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ತಿಂಡಿ, ಪಾನೀಯ, ಸಿಹಿ, ಪ್ರಸಾದ, ಕುಡಿಯುವ ನೀರು ಹಾಗೂ ಮಜ್ಜಿಗೆ ವಿತರಿಸಲಾಯಿತು.
ಅನ್ನದಾಸೋಹ… ಸೇವೆಯ ಸಡಗರ
ರಾಜಬೀದಿ ಉತ್ಸವಕ್ಕೆ ಶಿವಮೊಗ್ಗ ಮಾತ್ರವಲ್ಲದೆ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ಸಂಘ-ಸಂಸ್ಥೆಗಳು ತಿಂಡಿ, ಪಾನೀಯ, ಸಿಹಿ, ಪ್ರಸಾದ, ಕುಡಿಯುವ ನೀರು ಹಾಗೂ ಮಜ್ಜಿಗೆಯನ್ನು ವಿತರಿಸಿ ಸೇವೆ ಸಲ್ಲಿಸಿದವು.
ಗಾಂಧಿ ಬಜಾರ್ನುದ್ದಕ್ಕೂ ವಿವಿಧ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ವತಿಯಿಂದ ಪಾನಕ, ಮಜ್ಜಿಗೆ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಉತ್ಸವ ವೀಕ್ಷಿಸಲು ಆಗಮಿಸಿದ್ದ ಜನರು ಸೇವಾ ಕೇಂದ್ರಗಳ ಮೂಲಕ ಹಸಿವು ಮತ್ತು ದಾಹ ನೀಗಿಸಿಕೊಂಡರು.
ಬಿಗಿ ಭದ್ರತೆಯಲ್ಲಿ ರಾಜಬೀದಿ ಉತ್ಸವ
ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಮೆರವಣಿಗೆ ಭದ್ರತೆಯ ಮೇಲ್ವಿಚಾರಣೆಗೆ ಐವರು ಎಸ್ಪಿ ಹಾಗೂ ಎಎಸ್ಪಿ ದರ್ಜೆಯ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಅವರ ಅಧೀನದಲ್ಲಿ 22 ಡಿವೈಎಸ್ಪಿಗಳು, 84 ಇನ್ಸ್ಪೆಕ್ಟರ್ಗಳು, 289 ಪಿಎಸ್ಐಗಳು, 108 ಎಎಸ್ಐಗಳು, 2,134 ಕಾನ್ಸ್ಟೆಬಲ್ಗಳು ಹಾಗೂ ಗೃಹರಕ್ಷಕ ದಳದ 600 ಸಿಬ್ಬಂದಿ ಕಾರ್ಯನಿರ್ವಹಿಸಿದರು.
ಭದ್ರತೆಗಾಗಿ ಕರ್ನಾಟಕ ರಾಜ್ಯ ಮೀಸಲು ಪಡೆಯ 12 ತುಕಡಿಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 10 ತುಕಡಿಗಳು, ಎರಡು ತ್ವರಿತ ಕಾರ್ಯಾಚರಣೆ ಪಡೆಗಳು, ಒಂದು ಜಿಲ್ಲಾ ವಿಶೇಷ ಕಾರ್ಯಪಡೆ, ಎರಡು ಕ್ಷಿಪ್ರ ಕಾರ್ಯಪಡೆಗಳು, ಒಂದು ವಿಶೇಷ ಸಶಸ್ತ್ರ ಪಡೆ ಹಾಗೂ ಒಂದು ಸಶಸ್ತ್ರ ಸಿಬ್ಬಂದಿ ತುಕಡಿಯನ್ನು ನಿಯೋಜಿಸಲಾಗಿತ್ತು.
ಇದರೊಂದಿಗೆ 7 ಅಗ್ನಿಶಾಮಕ ವಾಹನಗಳು, 4 ಆಂಬುಲೆನ್ಸ್ಗಳು, 3,500ಕ್ಕೂ ಹೆಚ್ಚು ವಿಡಿಯೊ/ಸಿಸಿಟಿವಿ ಕ್ಯಾಮೆರಾಗಳು ಹಾಗೂ 12 ಡ್ರೋನ್ಗಳ ಮೂಲಕ ಮೆರವಣಿಗೆಯ ಮೇಲೆ ನಿಗಾ ವಹಿಸಲಾಗಿತ್ತು.
