ಶಿವಮೊಗ್ಗ: ₹1 ಲಕ್ಷದ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ‘ಹಲೋ ಶಿವಮೊಗ್ಗ’ ಕನ್ನಡ ದಿನಪತ್ರಿಕೆಯ ಸಂಪಾದಕ ಹಾಗೂ ಪ್ರಕಾಶಕ ಡಿ.ಜಿ. ನಾಗರಾಜ್ ಸಲ್ಲಿಸಿದ್ದ ಮೇಲ್ಮನವಿಯನ್ನು ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
‘ವಾಯ್ಸ್ ಆಫ್ ಶಿವಮೊಗ್ಗ’ ಕನ್ನಡ ದಿನಪತ್ರಿಕೆಯ ಸಂಪಾದಕ ಹಾಗೂ ಪ್ರಕಾಶಕ ಬಿ.ಆರ್. ನಂಜುಂಡಪ್ಪ ಅವರು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿತ್ತು.
ತೀರ್ಪಿನ ಪ್ರಕಾರ, 2020ರ ಜನವರಿ 23ರಂದು ನಾಗರಾಜ್ ಅವರು ತಮ್ಮ ಮಗಳ ವಿವಾಹದ ಖರ್ಚಿಗಾಗಿ ನಂಜುಂಡಪ್ಪ ಅವರಿಂದ ₹1 ಲಕ್ಷ ಹಣ ಪಡೆದಿದ್ದರು. ಈ ಪೈಕಿ ₹95,000ವನ್ನು ಚೆಕ್ ಮೂಲಕ ಹಾಗೂ ₹5,000ವನ್ನು ನಗದು ರೂಪದಲ್ಲಿ ನೀಡಲಾಗಿತ್ತು. ಒಂದು ತಿಂಗಳಲ್ಲಿ ಹಣ ಮರುಪಾವತಿಸುವುದಾಗಿ ಭರವಸೆ ನೀಡಿ ನಾಗರಾಜ್ ಅವರು ಆನ್-ಡಿಮಾಂಡ್ ಪ್ರಾಮಿಸರಿ ನೋಟ್ ನೀಡಿದ್ದರು ಎಂದು ನಂಜುಂಡಪ್ಪ ಆರೋಪಿಸಿದ್ದರು.
ನಂತರ ಸಾಲದ ಮೊತ್ತ ಮರುಪಾವತಿಗಾಗಿ ನಾಗರಾಜ್ ಅವರು 2020ರ ಡಿಸೆಂಬರ್ 8ರ ದಿನಾಂಕದ ₹1 ಲಕ್ಷದ ಚೆಕ್ ನೀಡಿದ್ದರು. ಚೆಕ್ ಅನ್ನು ಬ್ಯಾಂಕ್ಗೆ ಸಲ್ಲಿಸಿದಾಗ 2020ರ ಡಿಸೆಂಬರ್ 10ರಂದು ‘Funds Insufficient’ ಎಂಬ ಕಾರಣಕ್ಕೆ ಅಮಾನ್ಯಗೊಂಡಿತ್ತು. ಬಳಿಕ ನಂಜುಂಡಪ್ಪ ಅವರು 2021ರ ಜನವರಿ 5ರಂದು ಕಾನೂನು ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ಸ್ವೀಕರಿಸದೆ ಹಿಂದಿರುಗಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆದರೆ ನಾಗರಾಜ್ ಅವರು, ನಂಜುಂಡಪ್ಪ ಅವರು ತಮ್ಮ ಮುದ್ರಣಾಲಯದಲ್ಲಿ ‘ವಾಯ್ಸ್ ಆಫ್ ಶಿವಮೊಗ್ಗ’ ಪತ್ರಿಕೆ ಮುದ್ರಿಸುತ್ತಿದ್ದ ಸಂದರ್ಭದಲ್ಲಿ ಉಂಟಾದ ವ್ಯವಹಾರಕ್ಕೆ ಸಂಬಂಧಿಸಿದಂತೆ ₹95,000 ಮೊತ್ತದ ಚೆಕ್ ನೀಡಲಾಗಿತ್ತು. ತಾವು ಯಾವುದೇ ಸಾಲ ಪಡೆದಿಲ್ಲ ಹಾಗೂ ಖಾಲಿ ಸಹಿ ಮಾಡಿದ ಚೆಕ್ ಅನ್ನು ಭದ್ರತೆಗಾಗಿ ನೀಡಲಾಗಿತ್ತು ಎಂದು ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದರು.
ಚೆಕ್ ತಮ್ಮದೇ ಆಗಿದ್ದು, ಅದರ ಮೇಲಿನ ಸಹಿಯೂ ತಮ್ಮದೇ ಎಂದು ನಾಗರಾಜ್ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 139ರ ಅಡಿಯಲ್ಲಿ ನಂಜುಂಡಪ್ಪ ಅವರ ಪರ ಕಾನೂನುಬದ್ಧ ಪೂರ್ವಾನುಮಾನ ಉಂಟಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ನಂಜುಂಡಪ್ಪ ಅವರು ಸಲ್ಲಿಸಿದ್ದ ಆನ್-ಡಿಮಾಂಡ್ ಪ್ರಾಮಿಸರಿ ನೋಟ್ ಹಾಗೂ ಅದರ ಸಾಕ್ಷಿದಾರ ಎಂ. ಮಂಜುನಾಥ್ ಅವರ ಹೇಳಿಕೆಯನ್ನೂ ನ್ಯಾಯಾಲಯ ಪರಿಗಣಿಸಿದೆ. ಅಲ್ಲದೆ, ನಾಗರಾಜ್ ಅವರ ಮಗಳ ವಿವಾಹವು 2020ರ ಜನವರಿ 30ರಂದು ನಡೆದಿರುವುದನ್ನು ಶಿವಮೊಗ್ಗ ಜಿಲ್ಲಾ ವಕ್ಕಲಿಗರ ಸಂಘದ ವ್ಯವಸ್ಥಾಪಕರು ನೀಡಿದ್ದ ಪತ್ರ ದೃಢಪಡಿಸುತ್ತದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ನಾಗರಾಜ್ ಅವರು ಮುಂದಿಟ್ಟಿದ್ದ ‘ಭದ್ರತೆಗಾಗಿ ಚೆಕ್ ನೀಡಲಾಗಿತ್ತು’ ಎಂಬ ಪ್ರತಿವಾದವು ಸಮರ್ಥವಾದ ಪ್ರತಿರಕ್ಷಣೆಯಾಗಿ ಕಂಡುಬರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕಾನೂನು ನೋಟಿಸ್ ಕೂಡ ನಾಗರಾಜ್ ಅವರ ಮುದ್ರಣಾಲಯದ ವಿಳಾಸಕ್ಕೆ ಕಳುಹಿಸಲಾಗಿದ್ದು, ಅದನ್ನು ಸ್ವೀಕರಿಸದೆ ಹಿಂದಿರುಗಿಸಿರುವುದರಿಂದ ನೋಟಿಸ್ ಸೇವೆಯಾಗಿದೆ ಎಂದು ಪರಿಗಣಿಸಿರುವುದು ಸರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಈ ಹಿನ್ನೆಲೆಯಲ್ಲಿ ಜೆಎಂಎಫ್ಸಿ, ಶಿವಮೊಗ್ಗ, 2025ರ ಸೆಪ್ಟೆಂಬರ್ 9ರಂದು ನೀಡಿದ್ದ ತೀರ್ಪನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದೃಢಪಡಿಸಿದೆ. ಕೆಳ ನ್ಯಾಯಾಲಯ ವಿಧಿಸಿದ್ದ ₹1,05,000 ದಂಡ ಹಾಗೂ ದಂಡ ಪಾವತಿಸದಿದ್ದಲ್ಲಿ ಆರು ತಿಂಗಳ ಸರಳ ಜೈಲು ಶಿಕ್ಷೆ ಆದೇಶದಲ್ಲಿ ಯಾವುದೇ ಅಕ್ರಮ ಅಥವಾ ಅಸಮರ್ಪಕತೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ದಂಡದ ₹1 ಲಕ್ಷವನ್ನು ದೂರುದಾರರಿಗೆ ಪರಿಹಾರವಾಗಿ ನೀಡುವಂತೆ ಕೆಳ ನ್ಯಾಯಾಲಯ ನೀಡಿದ್ದ ಆದೇಶವೂ ಮುಂದುವರಿದಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಭಯ್ ಧನಪಾಲ್ ಚೌಗಲಾ ಅವರು 2026ರ ಆಗಸ್ಟ್ 31ರಂದು ತೀರ್ಪು ಪ್ರಕಟಿಸಿ, ಡಿ.ಜಿ. ನಾಗರಾಜ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಸಂಖ್ಯೆ 130/2025ನ್ನು ವಜಾಗೊಳಿಸಿದ್ದಾರೆ.
