ಜನ ನೋಟ
ರಾಜ್ಯ

ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ: ಇಬ್ಬರು ಮಕ್ಕಳ ಸಹಿತ ದಂಪತಿ ನಾಪತ್ತೆ

ದಾವಣಗೆರೆ: ಬೆಂಗಳೂರಿಗೆ ಹೋಗಿ ಬರುವುದಾಗಿ ಪೋಷಕರಿಗೆ ತಿಳಿಸಿ ಮನೆಯಿಂದ ಹೊರಟಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಬನಶಂಕರಿ ಬಡಾವಣೆಯ ನಿವಾಸಿಗಳಾದ ರಮೇಶ್ ಕುಮಾರ್ (38), ಅವರ ಪತ್ನಿ ಜಯಶೀಲ (36), ಪುತ್ರ ಹಿತೇಶ್ (9) ಹಾಗೂ ಮೂರು ವರ್ಷದ ಪುತ್ರಿ ಪ್ರೇರಣ ನಾಪತ್ತೆಯಾಗಿದ್ದಾರೆ.

ರಮೇಶ್ ಕುಮಾರ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದ್ದು, ಸಾರ್ವಜನಿಕರಿಂದಲೂ ಹಣ ಸಂಗ್ರಹಿಸಿ ಹೂಡಿಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ ಉಂಟಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ.

ಆಗಸ್ಟ್ 14ರಂದು ವೈಯಕ್ತಿಕ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಬರುವುದಾಗಿ ಪೋಷಕರಿಗೆ ತಿಳಿಸಿದ್ದ ರಮೇಶ್, ಕುಟುಂಬದೊಂದಿಗೆ ಆಟೋದಲ್ಲಿ ದಾವಣಗೆರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಬಳಿಕ ನಾಲ್ವರೂ ಮನೆಗೆ ವಾಪಸ್ ಬಂದಿಲ್ಲ. ಸಂಪರ್ಕಿಸಲು ಯತ್ನಿಸಿದಾಗ ಎಲ್ಲರ ಮೊಬೈಲ್‌ಗಳು ಸ್ವಿಚ್‌ಆಫ್ ಆಗಿರುವುದು ತಿಳಿದುಬಂದಿದೆ.

ನಾಲ್ಕೈದು ದಿನಗಳಾದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ರಮೇಶ್ ಅವರ ಕೊನೆಯ ಮೊಬೈಲ್ ನೆಟ್‌ವರ್ಕ್ ಲೊಕೇಶನ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಷೇರು ಮಾರುಕಟ್ಟೆಯ ನಷ್ಟದ ಹಿನ್ನೆಲೆಯಲ್ಲಿ ಕುಟುಂಬ ನಾಪತ್ತೆಯಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ತನಿಖೆಯ ಬಳಿಕವಷ್ಟೇ ನಿಖರ ಕಾರಣ ತಿಳಿದುಬರಬೇಕಿದೆ.

Related posts

ಕಾಂಗ್ರೆಸ್ ನಾಯಕಿ ಸೌಮ್ಯಾ ರೆಡ್ಡಿ ದಿಢೀರ್ ರಾಜಿನಾಮೆ

JanaNota Editor

ಸದನದ ಕಲಾಪಕ್ಕೆ ಬಿಜೆಪಿ ನಿರಂತರ ಅಡ್ಡಿ: ಮಧು ಬಂಗಾರಪ್ಪ ಆಕ್ರೋಶ

JanaNota Editor

ಪ್ರಜ್ವಲ್ ರೇವಣ್ಣಗೆ ಅಕ್ರಮವಾಗಿ ಮೊಬೈಲ್ ಕೊಟ್ಟಿದ್ದ ವ್ಯಕ್ತಿಯ ಬಂಧನ

JanaNota Editor