ಜನ ನೋಟ
ಶಿವಮೊಗ್ಗ

ಮತ ಕಳ್ಳತನದ ವಿರುದ್ಧ ನ.25ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ

ಶಿವಮೊಗ್ಗ : ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ಮೌಲ್ಯಗಳ ಮೇಲೆ ನಂಬಿಕೆ ಹೊಂದಿರುವ ಪ್ರತಿಯೊಬ್ಬರೂ ಮತ ಕಳ್ಳತನದ ವಿರುದ್ಧ ನಡೆಯುತ್ತಿರುವ ಹೋರಾಟದ ಭಾಗವಾಗಿ ನ.25ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಬೇಕು ಎಂದು ಎಐಸಿಸಿ ವೀಕ್ಷಕಿ ದೀಪ್ತಿ ಮೇರಿ ವರ್ಗೀಸ್ ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮತ ಉಳಿಸಿ, ದೇಶ ಉಳಿಸಿ’ ಹೋರಾಟ ನಿರ್ಣಾಯಕ ಹಂತ ತಲುಪಿದೆ. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತ ಕಳ್ಳತನದ ಆರೋಪಗಳಿಂದ ಆರಂಭವಾದ ಹೋರಾಟ ಇದೀಗ ದೇಶದ ಹಲವು ರಾಜ್ಯಗಳಿಗೆ ವಿಸ್ತರಿಸಿದೆ ಎಂದು ಹೇಳಿದರು.

ಮಹಾರಾಷ್ಟ್ರ, ಹರಿಯಾಣ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ಅಕ್ರಮಗಳ ಆರೋಪಗಳು ಕೇಳಿಬರುತ್ತಿವೆ. ಎಸ್‌ಐಆರ್ ಹೆಸರಿನಲ್ಲಿ ಕೋಟ್ಯಂತರ ನೈಜ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬ ಆತಂಕವಿದೆ. ಚುನಾವಣೆ ಗೆಲ್ಲುವ ಉದ್ದೇಶದಿಂದ ಅರ್ಹ ಮತದಾರರ ಹಕ್ಕು ಕಸಿಯುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವುದರ ಜತೆಗೆ ಸಮಾನತೆ, ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ. ಆದರೆ ಈ ಮೂಲ ಆಶಯಗಳಿಗೆ ಧಕ್ಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ನಮೂನೆ 6ರ ದುರ್ಬಳಕೆಯ ಆರೋಪವನ್ನೂ ಹೋರಾಟದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗುವುದು. ಚುನಾವಣಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿ ಮತದಾರರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಪ್ರಶ್ನಿಸಿದ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕೆಲವು ನಿರ್ಧಾರಗಳು ಏಕಪಕ್ಷೀಯವಾಗಿದ್ದು ಅನುಮಾನಕ್ಕೆ ಕಾರಣವಾಗಿವೆ ಎಂದು ಆರೋಪಿಸಿದರು. ಅವರು ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೀದಿಗಿಳಿದು ಹೋರಾಟವನ್ನು ಮುನ್ನಡೆಸುತ್ತಿದ್ದಾರೆ. ಈ ಹೋರಾಟವನ್ನು ವಾರ್ಡ್, ಬ್ಲಾಕ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಶಾಲಾ ಮಕ್ಕಳ ಶೂಗಳ ಗುಣಮಟ್ಟ ಉತ್ತಮ: ಮಧು ಬಂಗಾರಪ್ಪ

ಸಚಿವ ಮಧು ಬಂಗಾರಪ್ಪ ಮಾತನಾಡಿ, ರಾಜ್ಯದ ಶಾಲಾ ಮಕ್ಕಳಿಗೆ ವಿತರಿಸಲಾಗಿರುವ ಶೂಗಳ ಗುಣಮಟ್ಟ ಉತ್ತಮವಾಗಿದೆ. ಈ ಕುರಿತು ಎಲ್ಲಿಯೂ ವ್ಯಾಪಕ ದೂರುಗಳು ಬಂದಿಲ್ಲ. ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುವುದು. ಎಲ್ಲಿಯಾದರೂ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಅಂತಹ ಶೂಗಳನ್ನು ಬದಲಾಯಿಸಲಾಗುವುದು ಎಂದು ಹೇಳಿದರು.

ಬಿಜೆಪಿಯವರು ವಿನಾಕಾರಣ ಗೊಂದಲ ಸೃಷ್ಟಿಸುವುದನ್ನು ಬಿಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿದರೂ ಆಕ್ಷೇಪ ವ್ಯಕ್ತಪಡಿಸುವ ರೀತಿಯಲ್ಲಿ ಪ್ರತಿಕ್ರಿಯಿಸುವುದು ಏಕೆ ಎಂದು ಪ್ರಶ್ನಿಸಿದ ಅವರು, ಸರ್ಕಾರದ ವಿಚಾರಗಳನ್ನು ಪ್ರಶ್ನಿಸುವುದು ಮತ್ತು ನಿಜಾಂಶಗಳನ್ನು ಹೇಳುವುದು ತಮ್ಮ ಹಕ್ಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ನಿಗಮ ಮಂಡಳಿ ಅಧ್ಯಕ್ಷರಾದ ಚೇತನ್ ಗೌಡ, ಮಧುಸೂಧನ್, ಜಿ. ಪಲ್ಲವಿ, ಸಿ.ಎಸ್. ಚಂದ್ರಭೂಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೀಶ್, ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಎಸ್.ಟಿ. ಹಾಲಪ್ಪ, ಯು. ಶಿವಾನಂದ್, ಉಪಾಧ್ಯಕ್ಷ ಪಿ.ಎಸ್. ಗಿರೀಶ್ ರಾವ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ್, ಕಲೀಂ ಪಾಶಾ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರಮೇಶ್ ಶಂಕರಘಟ್ಟ, ರಾಜ್ಯ ಸಂಚಾಲಕ ಜಿ.ಡಿ. ಮಂಜುನಾಥ್, ಎಸ್.ಪಿ. ದಿನೇಶ್, ರಮೇಶ್ ಇಕ್ಕೇರಿ, ಪ್ರದೀಪ್ ಡಿ’ಮೆಲ್ಲೋ, ಆರ್. ರಾಜಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts

ರೈತರೇ ಗಮನಿಸಿ! ಶಿವಮೊಗ್ಗದಲ್ಲಿ ಅ.30ರಿಂದ 4 ದಿನಗಳ ಕೃಷಿ–ತೋಟಗಾರಿಕೆ ಮೇಳ

JanaNota Editor

ಸಚಿವರ ಹನಿಟ್ರ್ಯಾಪ್‌ ಚರ್ಚೆ ಸಚಿವ ಸಂಪುಟದ ಘನತೆಗೆ ಧಕ್ಕೆ: ಈಶ್ವರಪ್ಪ

JanaNota Editor

ಔಷಧ ಕ್ಷೇತ್ರದಲ್ಲಿ ಸಣ್ಣ ತಪ್ಪಿಗೂ ಅವಕಾಶವಿಲ್ಲ: ಪರಿಣತಿಯೇ ಜೀವಸಂಜೀವಿನಿ

JanaNota Editor