ಜನ ನೋಟ
ಶಿವಮೊಗ್ಗ

ಕಸಾಪ ಸ್ವಾಯತ್ತತೆ ಉಳಿಸಲು ಜಾಣಗೆರೆ ವೆಂಕಟರಾಮಯ್ಯ ಕಣಕ್ಕೆ

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ ಹಾಗೂ ಮೂಲ ಆಶಯಗಳನ್ನು ಸಂರಕ್ಷಿಸಿ, ಪರಿಷತ್ತನ್ನು ಕನ್ನಡಿಗರ ಸಕ್ರಿಯ ವೇದಿಕೆಯಾಗಿ ರೂಪಿಸುವ ಉದ್ದೇಶದಿಂದ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಪರಿಷತ್ತಿನ ಆಡಳಿತ ವ್ಯವಸ್ಥೆ ಹಾಗೂ ಬೈಲಾ ತಿದ್ದುಪಡಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ, ಕನ್ನಡಿಗರು ಮತ್ತು ಕರ್ನಾಟಕದ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಶತಮಾನಕ್ಕೂ ಹೆಚ್ಚು ಕಾಲ ತನ್ನ ಆಶಯಗಳನ್ನು ಮುಂದುವರಿಸಿಕೊಂಡು ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಡೆದ ಕೆಲವು ಬೈಲಾ ತಿದ್ದುಪಡಿಗಳು ಸಂಸ್ಥೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗುವಂತಿವೆ. ಸೇವೆಯ ಜವಾಬ್ದಾರಿಯಾಗಬೇಕಾದ ಅಧ್ಯಕ್ಷ ಸ್ಥಾನವನ್ನು ಅಧಿಕಾರದ ಕೇಂದ್ರವನ್ನಾಗಿ ನೋಡುವ ಪ್ರವೃತ್ತಿ ಸರಿಯಲ್ಲ ಎಂದು ಹೇಳಿದರು.

ಪರಿಷತ್ತಿನ ಆಡಳಿತದಲ್ಲಿ ರಾಜಕೀಯ ಪ್ರಭಾವ ಹೆಚ್ಚಾಗಬಾರದು. ಅಧ್ಯಕ್ಷರ ಅಧಿಕಾರಾವಧಿ ಐದು ವರ್ಷದಿಂದ ಮೂರು ವರ್ಷಕ್ಕೆ ಸೀಮಿತವಾಗಬೇಕು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಜತೆಗೆ ಕೃಷಿ ಸೇರಿದಂತೆ ಕನ್ನಡಿಗರ ಬದುಕಿಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಕುರಿತು ಚರ್ಚಿಸುವ ಸಮಗ್ರ ವೇದಿಕೆಯಾಗಿ ಪರಿಷತ್ತು ರೂಪುಗೊಳ್ಳಬೇಕು ಎಂಬುದು ತಮ್ಮ ಆಶಯ ಎಂದರು.

ಕನ್ನಡಪರ ಹೋರಾಟಗಾರ, ಪತ್ರಕರ್ತ, ಕವಿ ಹಾಗೂ ಕಾದಂಬರಿಕಾರರಾಗಿ ಗುರುತಿಸಿಕೊಂಡಿರುವ ಜಾಣಗೆರೆ ವೆಂಕಟರಾಮಯ್ಯ ಅವರು ಕನ್ನಡ ಭಾಷೆಯ ಪರ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕಳಂಕರಹಿತ ವ್ಯಕ್ತಿತ್ವ ಹೊಂದಿರುವ ಅವರನ್ನು ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂದು ಸಮಾನ ಮನಸ್ಕರು ಬೆಂಬಲಿಸಿದ್ದಾರೆ ಎಂದು ತಿಳಿಸಿದರು.

ಪರಿಷತ್ತಿನ ಹಾಲಿ ಅವಧಿ ನವೆಂಬರ್ 17ಕ್ಕೆ ಮುಕ್ತಾಯಗೊಳ್ಳಲಿದ್ದು, ಸರ್ಕಾರ ಈಗಾಗಲೇ ಚುನಾವಣಾಧಿಕಾರಿಯನ್ನು ನೇಮಕ ಮಾಡಿದೆ. ನವೆಂಬರ್ ನಂತರ ಚುನಾವಣಾ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದ್ದು, ಡಿಸೆಂಬರ್ ಮೂರನೇ ವಾರ ಅಥವಾ ಜನವರಿ ಮೊದಲ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದರು.

ಪಾರದರ್ಶಕ ಆಡಳಿತವೇ ಗುರಿ: ಜಾಣಗೆರೆ

ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ, ಪಾರದರ್ಶಕ ಆಡಳಿತ ಹಾಗೂ ಸಾಹಿತ್ಯ ಚಟುವಟಿಕೆಗಳ ಪುನಶ್ಚೇತನಕ್ಕಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿದರು.

ಪರಿಷತ್ತಿನ ಸಂಪನ್ಮೂಲಗಳನ್ನು ಸಾಹಿತ್ಯ ಚಟುವಟಿಕೆಗಳಿಗೆ ಸಮರ್ಪಕವಾಗಿ ಬಳಸಬೇಕು. ನೃಪತುಂಗ ಸೇರಿದಂತೆ ಪ್ರಮುಖ ಪ್ರಶಸ್ತಿಗಳ ವಿತರಣೆಗೆ ಆದ್ಯತೆ ನೀಡಬೇಕು. ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ನಿಯಮಿತವಾಗಿ ನಡೆಸಲು ಅಗತ್ಯ ನೆರವು ನೀಡಬೇಕು. ಜಿಲ್ಲಾ ಘಟಕಗಳಿಗೆ ಸೂಕ್ತ ಅನುದಾನ ಕಲ್ಪಿಸುವ ಜತೆಗೆ ಯುವ ಬರಹಗಾರರು, ಉದಯೋನ್ಮುಖ ಸಾಹಿತಿಗಳು ಹಾಗೂ ಹಿರಿಯ ಸಾಹಿತಿಗಳಿಗೆ ಸಮಾನ ಅವಕಾಶ ನೀಡಬೇಕು ಎಂದರು.

ಪರಿಷತ್ತು ಕೇವಲ ಆಡಳಿತಾತ್ಮಕ ಸಂಸ್ಥೆಯಾಗದೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡಿಗರ ಅಭಿವ್ಯಕ್ತಿಗೆ ಬಲವಾದ ವೇದಿಕೆಯಾಗಬೇಕು. ಜಿಲ್ಲಾ ಘಟಕಗಳನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನಕ್ಕೆ ಆದ್ಯತೆ ನೀಡುವುದು ತಮ್ಮ ಉದ್ದೇಶ ಎಂದು ತಿಳಿಸಿದರು.

ಅಧಿಕಾರದ ಕೇಂದ್ರವಾಗಬಾರದು ಕಸಾಪ: ಸಿದ್ದರಾಮಯ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸೇವೆಗೆ ಮೀಸಲಾಗಿರಬೇಕು. ಆದರೆ ಕೆಲವರು ಅಧಿಕಾರದ ಆಸೆಯಿಂದ ಪರಿಷತ್ತಿಗೆ ಪ್ರವೇಶಿಸಿ, ಸೇವೆಯ ಸ್ಥಾನವನ್ನು ಅಧಿಕಾರದ ಕುರ್ಚಿಯಂತೆ ಪರಿಗಣಿಸುತ್ತಿದ್ದಾರೆ ಎಂದು ಎಸ್.ಜಿ. ಸಿದ್ದರಾಮಯ್ಯ ಆರೋಪಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ನಡೆದ ಕೆಲವು ಬೈಲಾ ತಿದ್ದುಪಡಿಗಳಿಂದ ಪರಿಷತ್ತಿನ ಸ್ವಾಯತ್ತತೆಗೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡಿಗರ ಸಂಸ್ಥೆಯಾಗಿರುವ ಪರಿಷತ್ತು ಕನ್ನಡಿಗರಿಂದಲೇ ದೂರವಾಗದಂತೆ ಅದರ ಮೂಲ ಆಶಯಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದರು.

Related posts

ಮೊದಲ ಬಾರಿ ಸಿಗ್ನಲ್ ಜಂಪ್ ಗೆ 3 ಸಾವಿರ, ಮರುಕಳಿಸಿದರೆ 5 ಸಾವಿರ ಫೈನ್: ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಲು ಸರ್ಕಾರ ಪ್ಲಾನ್

JanaNota Editor

ಅಭಿವೃದ್ಧಿ ಕಾರ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ: ಆರ್.ಕೆ. ಸಿದ್ದರಾಮಣ್ಣ

JanaNota Editor

ಸಾಗರದಲ್ಲಿ ಭೀಕರ ಅಪಘಾತ: ಟಿಪ್ಪರ್ ಲಾರಿ ಡಿಕ್ಕಿಗೆ ಯುವತಿ ಸಾವು, ತಂದೆ ಗಂಭೀರ

JanaNota Editor