ಶಿವಮೊಗ್ಗ, : ನಗರದ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ಗಾಬರಿಗೊಂಡು ದಾಂದಲೆ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಆನೆಯ ವರ್ತನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬೆಳ್ಳಿ ಅಂಬಾರಿ ಕೆಳಗೆ ಬಿದ್ದು ಜಖಂಗೊಂಡಿದೆ. ಬಳಿಕ ಪಶುವೈದ್ಯರು ಅರೆವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ನಿಯಂತ್ರಣಕ್ಕೆ ತಂದರು.
ಸಂಜೆ 4.30ಕ್ಕೆ ಶಿವಪ್ಪ ನಾಯಕ ಅರಮನೆ ಬಳಿಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಅಂಬಾರಿ ಹೊತ್ತ ಸೋಮಣ್ಣ ಆನೆಯೊಂದಿಗೆ ಸಾಗರ್ ಮತ್ತು ಬಹದ್ದೂರ್ ಆನೆಗಳು ಹೆಜ್ಜೆ ಹಾಕುತ್ತಿದ್ದವು.
ಮೆರವಣಿಗೆ ಕೋಟೆ ರಸ್ತೆಯ ಜೈನ ಪಾರ್ಶ್ವನಾಥ ಮಂದಿರದ ಬಳಿ ತಲುಪುತ್ತಿದ್ದಂತೆ ಜನಜಂಗುಳಿ, ಪಟಾಕಿಗಳ ಸದ್ದು ಹಾಗೂ ವಾದ್ಯಗಳ ಶಬ್ದಕ್ಕೆ ಸೋಮಣ್ಣ ಆನೆ ಗಾಬರಿಗೊಂಡಿತು. ಮೆರವಣಿಗೆಯ ಮಾರ್ಗವನ್ನು ಬಿಟ್ಟು ಹಿಂದಕ್ಕೆ ತೆರಳತೊಡಗಿತು. ಇದನ್ನು ಹಿಂಬಾಲಿಸಿದ ಕುಮ್ಕಿ ಆನೆ ಸಾಗರ್ ಕೂಡ ಸ್ಥಳದಲ್ಲಿ ಕೆಲಕಾಲ ಆತಂಕಕ್ಕೆ ಕಾರಣವಾಯಿತು.
ಮಾವುತರು ಹಾಗೂ ಕಾವಾಡಿಗರು ಎರಡೂ ಆನೆಗಳನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು. ಸಾಗರ್ ಆನೆ ಶೀಘ್ರದಲ್ಲೇ ಶಾಂತಗೊಂಡರೂ, ಸೋಮಣ್ಣ ಆನೆಯನ್ನು ನಿಯಂತ್ರಿಸುವುದು ಕಷ್ಟವಾಯಿತು. ಈ ವೇಳೆ ಚಾಮುಂಡೇಶ್ವರಿ ದೇವಿಯ ಮೂರ್ತಿಯೊಂದಿಗೆ ಹೊತ್ತೊಯ್ಯುತ್ತಿದ್ದ ಬೆಳ್ಳಿ ಅಂಬಾರಿ ಕೆಳಗೆ ಬಿದ್ದು ಜಖಂಗೊಂಡಿತು.
ನಂತರ ಸೋಮಣ್ಣ ಆನೆ ನೇರವಾಗಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದೊಳಗೆ ತೆರಳಿ ನಿಂತಿತು. ಆನೆ ಯಾರನ್ನೂ ಹತ್ತಿರಕ್ಕೆ ಬರಲು ಬಿಡಲಿಲ್ಲ. ಆದರೆ, ಅದೃಷ್ಟವಶಾತ್ ನೆರೆದಿದ್ದ ಜನರ ಮೇಲೆ ದಾಳಿ ನಡೆಸಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ನಿಯಂತ್ರಿಸಲು ಕೆಲಕಾಲ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಪಶುವೈದ್ಯರನ್ನು ಕರೆಸಿ ಅರೆವಳಿಕೆ ಚುಚ್ಚುಮದ್ದು ನೀಡುವ ಮೂಲಕ ಆನೆಯನ್ನು ನಿಯಂತ್ರಣಕ್ಕೆ ತರಲಾಯಿತು.
ಮೊದಲ ಬಾರಿಗೆ ಅಂಬಾರಿ ಹೊತ್ತ ಸೋಮಣ್ಣ
ಕಳೆದ ಕೆಲವು ವರ್ಷಗಳಿಂದ ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಸಾಗರ್ ಆನೆ ಅಂಬಾರಿ ಹೊತ್ತು ಸಾಗುತ್ತಿತ್ತು. ಈ ಬಾರಿಯೂ ಸಾಗರ್ಗೆ ಅಂಬಾರಿ ಹೊರುವ ತರಬೇತಿ ನೀಡಲಾಗಿತ್ತು. ಆದರೆ, ಕಾಲುನೋವಿನ ಕಾರಣದಿಂದ ಅಂಬಾರಿ ಹೊರುವ ಜವಾಬ್ದಾರಿಯಿಂದ ಅದನ್ನು ಕೈಬಿಡಲಾಗಿತ್ತು.
ಮಂಗಳವಾರ ಸಂಜೆ ಅರಣ್ಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಸೋಮಣ್ಣ ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲು ನಿರ್ಧರಿಸಿದ್ದರು. ಸಾಗರ್ ಮತ್ತು ಬಹದ್ದೂರ್ ಆನೆಗಳನ್ನು ಕುಮ್ಕಿ ಆನೆಗಳಾಗಿ ನಿಯೋಜಿಸಲಾಗಿತ್ತು.
ಪ್ರತಿ ವರ್ಷ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದ ಬಾಲಣ್ಣ ಆನೆಯ ಕಣ್ಣಿಗೆ ಗಾಯವಾಗಿದ್ದರಿಂದ ಈ ಬಾರಿ ಅದರ ಬದಲಿಗೆ ಸೋಮಣ್ಣ ಆನೆಯನ್ನು ಮೆರವಣಿಗೆಗೆ ಕರೆತರಲಾಗಿತ್ತು.
ಆದರೆ, ಮೊದಲ ಬಾರಿಗೆ ಅಂಬಾರಿ ಹೊತ್ತ ಸೋಮಣ್ಣ ಆನೆ ಗಾಬರಿಗೊಂಡು ದಾಂದಲೆ ನಡೆಸಿದ ಪರಿಣಾಮ ದಸರಾ ಸಂಭ್ರಮದ ನಡುವೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
