ಜನ ನೋಟ
ರಾಜ್ಯ

ಪ್ರೀತಿಗೆ ನಿರಾಕರಣೆ – ಬೆಂಕಿ ಹಚ್ಚಿಕೊಂಡು ಯುವತಿಯನ್ನು ಗಟ್ಟಿಯಾಗಿ ತಬ್ಬಿಕೊಂಡ ಯುವಕ – ಯುವಕನ ಸ್ಥಿತಿ ಗಂಭೀರ

ಮೈಸೂರು: ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಯುವಕನೊಬ್ಬ ಯುವತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯ ಮೇಲೆ ಪೆಟ್ರೋಲ್ ಸುರಿದು, ತಾನೂ ಪೆಟ್ರೋಲ್ ಸುರಿದುಕೊಂಡು ಆಕೆಯನ್ನು ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡಿರುವ ಭೀಕರ ಘಟನೆ ನಗರದ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಚಂದನ್ (27) ಕೃತ್ಯ ಎಸಗಿದ ಯುವಕ. ಘಟನೆಯಲ್ಲಿ ಚಂದನ್‌ಗೆ ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಯುವತಿಗೂ ಶೇ.20ರಷ್ಟು ಸುಟ್ಟ ಗಾಯಗಳಾಗಿದ್ದು, ಇಬ್ಬರಿಗೂ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚಂದನ್ ಅದೇ ಗ್ರಾಮದ ಡಿಪ್ಲೊಮಾ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದಳು.

ಮಂಗಳವಾರ ಯುವತಿ ಹಾಸ್ಟೆಲ್‌ನಿಂದ ಕಾಲೇಜಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆಕೆಯನ್ನು ಮಾರ್ಗಮಧ್ಯೆ ತಡೆದ ಚಂದನ್, ಮತ್ತೆ ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಯುವತಿ ನಿರಾಕರಿಸಿದ ಬಳಿಕ ಆಕೆಯ ಮೇಲೆ ಪೆಟ್ರೋಲ್ ಸುರಿದು, ತನ್ನ ಮೇಲೂ ಪೆಟ್ರೋಲ್ ಸುರಿದುಕೊಂಡು ಆಕೆಯನ್ನು ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನಲಾಗಿದೆ.

ಯುವತಿ ಆತನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದು, ಆಕೆಗೆ ಸುಟ್ಟ ಗಾಯಗಳಾಗಿವೆ. ಚಂದನ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಸುಟ್ಟ ಗಾಯಗಳಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ವಿಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಂಡವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಯುವಕ ತಂದಿದ್ದ ಪೆಟ್ರೋಲ್ ಬಾಟಲಿ, ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಯುವತಿಯ ಕಡೆಯಿಂದ ದೂರು ನೀಡಲಾಗಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

Related posts

ಬಿಗ್‌ಬಾಸ್‌ ಕನ್ನಡ ಸೀಸನ್‌ 13ಕ್ಕೆ ಕಾನೂನು ಸಂಕಷ್ಟ : NOC ನೀಡದಂತೆ ದೂರು

JanaNota Editor

ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ : ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿದ ಆತಂಕ..!

JanaNota Editor

ರಾಜ್ಯದಲ್ಲಿ ತಂಬಾಕು, ಗುಟ್ಕಾ, ಪಾನ್ ಮಸಾಲ ನಿಷೇಧಿಸಿ ಸರ್ಕಾರದಿಂದ ಆದೇಶ

JanaNota Editor