ಶಿವಮೊಗ್ಗ: ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಹಾಗೂ ಅವರ ವಿರುದ್ಧದ ಗಂಭೀರ ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿ ದಹಿಸಿ, ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರಜಾಪ್ರಭುತ್ವದ ಪ್ರಮುಖ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಘನತೆಗೆ ಧಕ್ಕೆ ಉಂಟಾಗಿದೆ. ವಿರೋಧ ಪಕ್ಷಗಳು ಹಾಗೂ ನಾಗರಿಕ ಸಂಘಟನೆಗಳ ಆಕ್ಷೇಪಗಳಿದ್ದರೂ ಅವುಗಳಿಗೆ ಸೂಕ್ತ ಸ್ಪಂದನೆ ನೀಡದೆ ಆಯೋಗವು ಸರ್ವಾಧಿಕಾರಿ ಧೋರಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.
ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವ ಶಂಕೆಯಿದ್ದು, ಅರ್ಹ ಮತದಾರರು, ಅದರಲ್ಲೂ ಬಡವರು, ಶೋಷಿತರು ಹಾಗೂ ಅಂಚಿನ ಸಮುದಾಯದ ಜನರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಆತಂಕ ಎದುರಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಮತದಾನದ ಹಕ್ಕು ಕಸಿಯದಿರಲಿ: ಸ್ವತಂತ್ರ ತನಿಖೆಗೆ ಆಗ್ರಹ
ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಮತದಾರರ ಪಟ್ಟಿಯಿಂದ ಅರ್ಹ ಮತದಾರರು ಹೊರಗುಳಿದಿರುವ ಕುರಿತು ಸ್ವತಂತ್ರ ತನಿಖೆ ನಡೆಸಬೇಕು. ಯಾವುದೇ ದುರ್ಬಲ ವರ್ಗದ ಮತದಾರರು ತಮ್ಮ ಸಂವಿಧಾನಬದ್ಧ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಲ್ಲದೆ, ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಸಾರ್ವಜನಿಕವಾಗಿ ವ್ಯಕ್ತವಾಗಿರುವ ಅನುಮಾನಗಳನ್ನು ಪರಿಶೀಲಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಗಂಭೀರ ಆರೋಪಗಳನ್ನು ಸಾಂವಿಧಾನಿಕ ಪ್ರಕ್ರಿಯೆಯ ಮೂಲಕ ತನಿಖೆಗೊಳಪಡಿಸಿ, ಆರೋಪಗಳು ಸಾಬೀತಾದಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೀಶ್, ಮಾಜಿ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಎನ್. ರಮೇಶ್, ಆರ್.ಎಂ. ಮಂಜುನಾಥ ಗೌಡ, ಎಂ. ಶ್ರೀಕಾಂತ್, ಇಸ್ಮಾಯಿಲ್ ಖಾನ್, ಚೇತನ್ ಗೌಡ, ಡಾ. ಶ್ರೀನಿವಾಸ್ ಕರಿಯಣ್ಣ, ಶ್ವೇತಾ ಬಂಡಿ, ರಮೇಶ್ ಶಂಕರಘಟ್ಟ, ಚಂದ್ರಭೂಪಾಲ್, ಶಿವಣ್ಣ, ಎಸ್.ಟಿ. ಹಾಲಪ್ಪ, ಶರತ್ ಮರಿಯಪ್ಪ, ಶಾಂತವೀರ ನಾಯ್ಕ, ಜಿ.ಡಿ. ಮಂಜುನಾಥ್, ಮಧುಸೂದನ್, ಹಾಪ್ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ದಕ್ಷಿಣ ಮತ್ತು ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಂ ಪಾಷ ಹಾಗೂ ಶಿವಕುಮಾರ್, ಹೆಚ್.ಪಿ. ಗಿರೀಶ್, ನೇತ್ರಾವತಿ ಗೌಡ, ಪಾಲಾಕ್ಷಿ, ನಾಗರಾಜ್ ಕಂಕಾರಿ, ಷಡಾಕ್ಷರಿ, ವಿಜಯಲಕ್ಷ್ಮಿ ಪಾಟೀಲ್, ಸುವರ್ಣಾ ನಾಗರಾಜ್, ಚಿನ್ನಪ್ಪ, ಸ್ಟೆಲಾ ಮಾರ್ಟಿನ್, ತಂಗರಾಜ್, ದೇವೇಂದ್ರಪ್ಪ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
