ವರದಿ: ಸನತ್ ಶಿವಮೊಗ್ಗ
ಶಿವಮೊಗ್ಗ: ತಂತ್ರಜ್ಞಾನ ಬೆಳೆದಂತೆ ಮಾಧ್ಯಮ ಕ್ಷೇತ್ರವೂ ಸಂಪೂರ್ಣವಾಗಿ ಬದಲಾಗುತ್ತಿದ್ದು, ಮುದ್ರಣ, ದೃಶ್ಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಮಾಡುವವರಿಗೆ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಮತ್ತು ಅದರ ಪರಿಣಾಮಗಳ ಬಗ್ಗೆ ಅರಿವು ಹಾಗೂ ಜ್ಞಾನ ಹೊಂದಿರುವುದು ಅನಿವಾರ್ಯವಾಗಿದೆ ಎಂದು ಎಐ ತಂತ್ರಜ್ಞಾನ ತಜ್ಞ ಡಾ. ಪವನ್ ಕುಮಾರ್ ತಿಳಿಸಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಶಿವಮೊಗ್ಗ ರೋಟರಿ ಕ್ಲಬ್ ಸಹಯೋಗದಲ್ಲಿ ಭಾನುವಾರ ಪತ್ರಿಕಾ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ (ಎಐ) ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಎಐ ಬಳಸಿ ನಕಲಿ ವಿಡಿಯೋಗಳು(ಡೀಪ್ ಫೇಕ್ ) ಹಾಗೂ ಇತರ ಸುಳ್ಳು ಮಾಹಿತಿಗಳನ್ನು ಸೃಷ್ಟಿಸುವುದು ಹೆಚ್ಚಾಗುತ್ತಿದೆ. ಯಾವುದು ನಿಜ, ಯಾವುದು ಸುಳ್ಳು ಎಂಬುದನ್ನು ಪತ್ತೆಹಚ್ಚಲು ಮಾಧ್ಯಮ ಪ್ರತಿನಿಧಿಗಳಿಗೆ ಎಐ ತಂತ್ರಜ್ಞಾನದ ಜ್ಞಾನ ಅಗತ್ಯವಾಗಿದೆ. ಸುದ್ದಿ ನೀಡುವ ಭರದಲ್ಲಿ ಸುಳ್ಳು ಎಐ ಸುದ್ದಿಗಳನ್ನು ನೀಡುವಂತಾಗಬಾರದು ಎಂದು ಅವರು ಆಶಿಸಿದರು.
ಇದೇ ಸಂದರ್ಭದಲ್ಲಿ ಡಾ. ಪವನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಟ್ರಸ್ಟ್ ಉಪಾಧ್ಯಕ್ಷ ಹೊನ್ನಾಳಿ ಚಂದ್ರಶೇಖರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಾರುತಿ, ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷ ಎನ್. ಗೋಪಿನಾಥ್, ಲಕ್ಷ್ಮಿ ಗೋಪಿನಾಥ್, ಜನಾರ್ದನ ಪೈ, ಪ್ರಾಂಶುಪಾಲ ರಂಗನಾಥ್, ವೀರಣ್ಣ ಹುಗ್ಗಿ , ಎಐ ತರಬೇತಿ ನೀಡಲು ಆಗಮಿಸಿದ್ದ ತಂಡದ ಭುವನ್, ಪ್ರಜ್ವಲ್, ಶ್ರೇಯಸ್ ಹಾಗೂ ಅದಿತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
