ಜನ ನೋಟ
ಶಿವಮೊಗ್ಗ

ವಂದೇ ಮಾತರಂ ಪೂರ್ಣಗೀತೆ ಹಾಡಿಸಿದ ಆರೋಪ : ಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗ : ಮಹಾನಗರ ಪಾಲಿಕೆಯ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ವಂದೇ ಮಾತರಂ ಗೀತೆಯ ನಾಲ್ಕೂ ಚರಣಗಳನ್ನು ಹಾಡಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.

ಸರ್ಕಾರದ ಆದೇಶದಂತೆ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಬೇಕಾಗಿತ್ತು. ಆದರೆ ಸ್ಥಳೀಯ ಶಾಸಕ ಹಾಗೂ ದಸರಾ ಸಮಿತಿ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಅವರು ನಾಲ್ಕೂ ಚರಣಗಳನ್ನು ಹಾಡಿಸಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಮಾಯಣ್ಣಗೌಡ ಉಪಸ್ಥಿತರಿದ್ದರೂ ಆದೇಶ ಉಲ್ಲಂಘನೆಯನ್ನು ತಡೆಯಲು ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.

ಈ ಘಟನೆಯಿಂದಾಗಿ ನಿಗಮ ಮಂಡಳಿಯ ಅಧ್ಯಕ್ಷರು ಹಾಗೂ ನಾಮನಿರ್ದೇಶಿತ ಸದಸ್ಯರು ಸಭಾತ್ಯಾಗ ಮಾಡಬೇಕಾಯಿತು ಎಂದು ಪ್ರತಿಭಟನಾಕಾರರು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೀಶ್ ಮಾತನಾಡಿ, ಈ ಹಿಂದೆ ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶದಂತೆ ಎರಡು ಚರಣಗಳನ್ನು ಮಾತ್ರ ಹಾಡಿದಾಗ ಇದೇ ಶಾಸಕ ಸಭಾತ್ಯಾಗ ಮಾಡಿದ್ದರು. ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿಯೂ ಇದೇ ನಿಲುವು ತಳೆದಿದ್ದರು. ಆದರೆ ಇದೀಗ ದಸರಾ ಕಾರ್ಯಕ್ರಮದಲ್ಲಿ ನಡೆದಿರುವ ಘಟನೆ ಪೂರ್ವನಿಯೋಜಿತವಾಗಿದೆ ಎಂದು ಆರೋಪಿಸಿದರು.

ದಸರಾ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಚನ್ನಬಸಪ್ಪ ಅವರ ನೇತೃತ್ವದಲ್ಲೇ ಪೂರ್ವಸಿದ್ಧತೆ ನಡೆಸಿ, ಸರ್ಕಾರದ ಆದೇಶ ಉಲ್ಲಂಘಿಸಿ ವಂದೇ ಮಾತರಂ ಗೀತೆಯ ನಾಲ್ಕೂ ಚರಣಗಳನ್ನು ಹಾಡಿಸಲಾಗಿದೆ ಎಂದು ಯೋಗೀಶ್ ದೂರಿದರು. ಪಾಲಿಕೆ ಆಯುಕ್ತರೂ ಇದನ್ನು ತಡೆಯುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.

ಮಹಾನಗರ ಪಾಲಿಕೆಯ ಬದಲಿಗೆ ಜಿಲ್ಲಾಡಳಿತವೇ ಮುಂದಿನ ದಿನಗಳಲ್ಲಿ ದಸರಾ ಕಾರ್ಯಕ್ರಮವನ್ನು ಆಯೋಜಿಸಬೇಕು. ದಸರಾವನ್ನು ಬಿಜೆಪಿ ಕಾರ್ಯಕ್ರಮವನ್ನಾಗಿ ರೂಪಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಶಾಸಕ ಎಸ್.ಎನ್. ಚನ್ನಬಸಪ್ಪ ಅವರನ್ನು ದಸರಾ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೈಬಿಡಬೇಕು ಹಾಗೂ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಮನವಿಯಲ್ಲಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಆರ್. ಪ್ರಸನ್ನಕುಮಾರ್, ಚೇತನ್ ಗೌಡ, ಮಧುಸೂಧನ್, ಎಸ್.ಪಿ. ದಿನೇಶ್, ಶಿ.ಜು. ಪಾಷ, ಹೆಚ್.ಎಂ. ಮಧು, ಪಾಲಕ್ಷಿ, ಆರ್. ರಾಜಶೇಖರ್, ಜಿ.ಡಿ. ಮಂಜುನಾಥ್, ದಿನೇಶ್ ಪಟೇಲ್, ಮಂಜುನಾಥ ಬಾಬು, ಕವಿತಾ, ರೇಷ್ಮಾ, ಯಮುನಾ ರಂಗೇಗೌಡ, ವಿಜಯಲಕ್ಷ್ಮಿ ಪಾಟೀಲ್, ಸ್ಟೆಲಾ ಮಾರ್ಟಿನ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಶಿವಮೊಗ್ಗ : ಎಸ್‌ಐಆರ್ ಅಕ್ರಮ ಖಂಡಿಸಿ ಕಪ್ಪು ಬಾವುಟ ಪ್ರದರ್ಶನ : ರೈಲ್ವೆ ಸಚಿವರ ಕಾರಿಗೆ ಮುತ್ತಿಗೆ

JanaNota Editor

ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಶಿವಮೊಗ್ಗದಲ್ಲಿ ಡಿಸಿ ಕಚೇರಿ ಮುತ್ತಿಗೆ ಯತ್ನ

JanaNota Editor

ಹಾಸ್ಟೆಲ್ ಊಟದ ಹಾಲ್‌ನಲ್ಲಿ ಬೀದಿ ನಾಯಿ : ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಕಂಡುಬಂದ ಅಚ್ಚರಿ ದೃಶ್ಯ

JanaNota Editor