ಜನ ನೋಟ
ಶಿವಮೊಗ್ಗ

2018ರ ಮತದಾರರ ಹೆಚ್ಚಳದ ಬಗ್ಗೆ ತನಿಖೆಯಾಗಲಿ : ಕೆ.ಬಿ. ಪ್ರಸನ್ನಕುಮಾರ್

ಶಿವಮೊಗ್ಗ : ಶಿವಮೊಗ್ಗ ಕ್ಷೇತ್ರದಲ್ಲಿ ಎಸ್‌ಐಆರ್ ಅತ್ಯುತ್ತಮವಾಗಿ ನಡೆದಿದ್ದು, ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಹೆಚ್ಚಳವಾಗಿರುವುದು ಇದೀಗ ಎಸ್‌ಐಆರ್‌ನಿಂದ ಬೆಳಕಿಗೆ ಬಂದಿದೆ. ಈ ಕುರಿತು ಲೋಕಾಯುಕ್ತ ಹಾಗೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ 2,15,937 ಮತದಾರರಿದ್ದರು. 2018ರಲ್ಲಿ ಈ ಸಂಖ್ಯೆ 2,56,373ಕ್ಕೆ ಏರಿಕೆಯಾಗಿದ್ದು, ಸುಮಾರು 40,436 ಮತದಾರರು ಹೆಚ್ಚಾಗಿದ್ದರು. 2023ರಲ್ಲಿ 2,60,757 ಮತದಾರರಿದ್ದು, ಕೇವಲ 4,384ರಷ್ಟು ಹೆಚ್ಚಳವಾಗಿತ್ತು. ಆದರೆ 2018ರಲ್ಲಿ ಮಾತ್ರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತದಾರರು ಹೆಚ್ಚಾಗಿರುವುದು ಚರ್ಚೆಗೆ ಕಾರಣವಾಗಿದೆ ಎಂದರು.

ಇತ್ತೀಚಿನ ಎಸ್‌ಐಆರ್ ಪ್ರಕ್ರಿಯೆಯಲ್ಲಿ 56,432 ಮತಗಳು ವಿವಿಧ ಕಾರಣಗಳಿಂದ ಪಟ್ಟಿಯಿಂದ ಹೊರಗುಳಿದಿವೆ. ಈ ಪೈಕಿ 9,187 ಮತದಾರರು ಮೃತಪಟ್ಟವರು, 5,719 ಮತಗಳು ನಕಲಿ ಎಂದು ಗುರುತಿಸಲಾಗಿದೆ ಹಾಗೂ 1,800 ಮತದಾರರಿಗೆ ಮಾಹಿತಿ ಕೋರಿ ನೋಟಿಸ್ ನೀಡಲಾಗಿದೆ. ಹಾಗಾದರೆ ಉಳಿದ 29,962 ಮತಗಳು ಎಲ್ಲಿಗೆ ಹೋದವು ಎಂಬುದರ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಮತದಾರರ ಪಟ್ಟಿಗೆ ಅನರ್ಹರನ್ನು ಸೇರ್ಪಡೆಗೊಳಿಸುವುದು ಕಾನೂನುಬಾಹಿರ. ನಗರ ಕ್ಷೇತ್ರದ ಮತದಾರರಲ್ಲದವರನ್ನು ಯಾವುದೇ ಒತ್ತಡಕ್ಕೆ ಮಣಿದು ಪಟ್ಟಿಗೆ ಸೇರ್ಪಡೆ ಮಾಡಬಾರದು. ಈ ಕುರಿತು ಚುನಾವಣಾ ಆಯೋಗ ಎಚ್ಚರಿಕೆ ವಹಿಸಬೇಕು. ಎಲ್ಲ ಪಕ್ಷಗಳ ಬಿಎಲ್‌ಎಗಳು ಕರಡು ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ನರಸಿಂಹ ಗಂಧದಮನೆ, ದೀಪಕ್ ಸಿಂಗ್, ಸಂಗಯ್ಯ ಮುಂತಾದವರಿದ್ದರು.

Related posts

ನಾಗೇಂದ್ರಗೆ ಕನಕಾಭಿಷೇಕ ಮಾಡುವ ಮೂಲಕ ಭ್ರಷ್ಟಾಚಾರ ಮುಚ್ಚಿಹಾಕಲಾಗುತ್ತಿದೆ: ಎಸ್.ಎನ್.ಚನ್ನಬಸಪ್ಪ

JanaNota Editor

ಮೈಸೂರು ಸ್ಯಾಂಡಲ್ ಮೇಳ – ಶಿವಮೊಗ್ಗದಲ್ಲಿ

JanaNota Editor

ಹಣಗೆರೆ ವನ್ಯಜೀವಿ ವಲಯದಲ್ಲಿ ಬೇಟೆಗೆ ಸಜ್ಜಾಗಿದ್ದ ನಾಲ್ವರು ಬೇಟೆಗಾರರ ಬಂಧನ

JanaNota Editor