ಜನ ನೋಟ
ಕ್ರೈಂ ನ್ಯೂಸ್

ಶಿವಮೊಗ್ಗ : ಚೆಸ್ ಆಟ ವೀಕ್ಷಿಸುತ್ತಾ ಕುಳಿತಿದ್ದ 10ನೇ ತರಗತಿ ವಿದ್ಯಾರ್ಥಿ ಕುಸಿದು ಬಿದ್ದು ಸಾವು

ವರದಿ: ಸನತ್ ಶಿವಮೊಗ್ಗ 

 

ಶಿವಮೊಗ್ಗ: ಶಾಲೆಯಲ್ಲಿ ಸಹಪಾಠಿಗಳು ಚೆಸ್ ಆಡುತ್ತಿದ್ದುದನ್ನು ವೀಕ್ಷಿಸುತ್ತಾ ಕುಳಿತಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ತಮ್ಮಡಿಹಳ್ಳಿಯಲ್ಲಿ ನಡೆದಿದೆ.

ತಮ್ಮಡಿಹಳ್ಳಿಯ ಸರ್ಕಾರಿ ಹೈಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿನಯ್ ಜೆ.ಕೆ (15) ಮೃತಪಟ್ಟ ವಿದ್ಯಾರ್ಥಿ. ಶಾಲೆಯಲ್ಲಿ ಎಂದಿನಂತೆ ಇತರ ವಿದ್ಯಾರ್ಥಿಗಳು ಚೆಸ್ ಆಡುತ್ತಿದ್ದ ವೇಳೆ ವಿನಯ್ ಆಸಕ್ತಿಯಿಂದ ಆಟವನ್ನು ವೀಕ್ಷಿಸುತ್ತಾ ಕುಳಿತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಏಕಾಏಕಿ ಆತ ಕುಸಿದು ಬಿದ್ದಿದ್ದಾನೆ.

ವಿದ್ಯಾರ್ಥಿ ಕುಸಿದು ಬಿದ್ದಿರುವುದನ್ನು ಗಮನಿಸಿದ ಶಿಕ್ಷಕರು ಹಾಗೂ ಪೋಷಕರು ತಕ್ಷಣ ಆತನನ್ನು ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ, ವಿದ್ಯಾರ್ಥಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ಆದರೆ, ದುರದೃಷ್ಟವಶಾತ್ ಮೆಗ್ಗಾನ್ ಆಸ್ಪತ್ರೆಗೆ ತಲುಪುವಷ್ಟರಲ್ಲೇ ವಿನಯ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ವಿದ್ಯಾರ್ಥಿಯ ಹಠಾತ್ ಸಾವಿನಿಂದ ಶಾಲಾ ಶಿಕ್ಷಕರು, ಸಹಪಾಠಿಗಳು ಹಾಗೂ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.

ಶಿಕಾರಿಪುರ ಮೂಲದ ವಿದ್ಯಾರ್ಥಿ
ಮೃತ ವಿನಯ್ ಮೂಲತಃ ಶಿಕಾರಿಪುರದವನಾಗಿದ್ದು, ವಿದ್ಯಾಭ್ಯಾಸಕ್ಕಾಗಿ ಆಯನೂರು ಸಮೀಪದ ತಮ್ಮಡಿಹಳ್ಳಿಯಲ್ಲಿರುವ ಅಜ್ಜನ ಮನೆಯಲ್ಲಿ ವಾಸವಾಗಿದ್ದನು. ಓದಿನಲ್ಲಿ ತೊಡಗಿಸಿಕೊಂಡಿದ್ದ ವಿದ್ಯಾರ್ಥಿ ಶಾಲೆಯಲ್ಲಿ ಸಾಮಾನ್ಯವಾಗಿಯೇ ಇದ್ದ ಎನ್ನಲಾಗಿದ್ದು, ಯಾವುದೇ ಮುನ್ಸೂಚನೆಯಿಲ್ಲದೆ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.

Screenshot

ಸಾವಿನ ಬಗ್ಗೆ ಪೋಷಕರ ಅನುಮಾನ
ವಿನಯ್ ಸಾಮಾನ್ಯವಾಗಿದ್ದರೂ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವುದಕ್ಕೆ ಆತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಘಟನೆಗೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಿದ್ಯಾರ್ಥಿಯ ಸಾವಿನ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

Related posts

ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧೆಡೆ ಅಪರಾಧ ಪ್ರಕರಣಗಳು

JanaNota Editor

ಶಿವಮೊಗ್ಗದಲ್ಲಿ ನಾನ್ ವೆಜ್ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಾಳಿ

JanaNota Editor

ಶಿವಮೊಗ್ಗದ ಫುಡ್ ಕೋರ್ಟ್ ಗಳಿಗೆ ಎಸಿ ಮೈತ್ರಿ ಭೇಟಿ : ಪರಿಶೀಲನೆ

JanaNota Editor